ಅಬುಧಾಬಿಯಲ್ಲಿ ಮೃತಪಟ್ಟ ಅಡ್ಡೂರಿನ ಯುವಕನ ಮೃತದೇಹ ರವಿವಾರ ತವರೂರಿಗೆ

Update: 2020-06-20 19:33 GMT
ಯಶವಂತ ಪೂಜಾರಿ

ಮಂಗಳೂರು, ಜೂ.20: ಎರಡು ವಾರಗಳ ಹಿಂದೆ ಅಬುಧಾಬಿಯಲ್ಲಿ ಮೃತಪಟ್ಟ ಅಡ್ಡೂರಿನ ಯುವಕನೋರ್ವನ ಮೃತದೇಹವು ಜೂ.21ರಂದು ತವರೂರು ತಲುಪಲಿದೆ. ಶನಿವಾರ ಪೂರ್ವಾಹ್ನ 11:30ಕ್ಕೆ ಮೃತದೇಹವನ್ನು ವಿಮಾನದಲ್ಲಿ ಕಳುಹಿಸಿಕೊಡಲಾಗಿದ್ದು, ರಾತ್ರಿ ಕಲ್ಲಿಕೋಟೆಗೆ ತಲುಪಿದೆ. ರವಿವಾರ ಬೆಳಗ್ಗೆ ಅಡ್ಡೂರಿನ ಪುಣಿಕೋಡಿಗೆ ಮೃತದೇಹ ತಲುಪಲಿದೆ ಎಂದು ತಿಳಿದುಬಂದಿದೆ.

ಅಡ್ಡೂರಿನ ದಿ. ನಾರಾಯಣ ಪೂಜಾರಿ ಮತ್ತು ಲಲಿತಾ ದಂಪತಿಯ ಪುತ್ರ ಯಶವಂತ ಪೂಜಾರಿ (37) ಮೃತಪಟ್ಟ ಯುವಕ. ಈ ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬರು ಪುತ್ರಿಯಿದ್ದು, ಆ ಪೈಕಿ ಯಶವಂತ ಮೂರು ವರ್ಷಗಳ ಹಿಂದೆ ಅಬುಧಾಬಿಗೆ ಉದ್ಯೋಗಕ್ಕೆ ತೆರಳಿದ್ದರು. ಜೂ.5ರಂದು ಇವರು ಹೃದಯಾಘಾತದಿಂದ ಮೃತಪಟ್ಟಿದ್ದರು.

ಆರಂಭದಲ್ಲಿ ಯಶವಂತ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಹೃದಯಾಘಾತದಿಂದ ನಿಧನರಾಗಿರುವುದಾಗಿ ತಿಳಿದು ಬಂತು. ಈ ಬಗ್ಗೆ ಮಾಹಿತಿ ಪಡೆದ ‘ವಾರ್ತಾಭಾರತಿ’ಯ ಅಬುಧಾಬಿಯ ಓದುಗರು ಯುವಕನ ಫೇಸ್‌ಬುಕ್ ಖಾತೆ ಪರಿಶೀಲಿಸಿತು. ಹಾಗೇ ತೋಡಾರು ಆದರ್ಶ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಆಸಿಫ್ ಸೂರಲ್ಪಾಡಿಯವರ ಮೂಲಕ ಮೃತಪಟ್ಟಿರುವುದು ಅಡ್ಡೂರಿನ ಯುವಕ ಎಂದು ಖಾತ್ರಿಪಡಿಸಿತು. ನಂತರ ಯುವಕನ ಮನೆಯವರಿಗೆ ವಿಷಯ ತಿಳಿಸಲಾಯಿತು. ಮಗನ ಅನಿರೀಕ್ಷಿತ ಸಾವಿನ ಸುದ್ದಿ ಕೇಳಿ ಕಂಗೆಟ್ಟ ತಾಯಿ ಲಲಿತಾ ಮಗನ ಅಂತಿಮ ದರ್ಶನಕ್ಕೆ ಹಂಬಲಿಸಿದರು. ಆದರೆ ಲಾಕ್‌ಡೌನ್ ಸಡಿಲಿಕೆಯಾದರೂ ಕೊರೋನ ಹಾವಳಿ ಮುಂದುವರಿದಿರುವುದರಿಂದ ವಿದೇಶದಿಂದ ಮೃತದೇಹವನ್ನು ತರುವುದು ಅಷ್ಟು ಸುಲಭವಿರಲಿಲ್ಲ. ಆದರೂ ಹೆತ್ತ ತಾಯಿಯ ಅಭಿಲಾಷೆ ಈಡೇರಿಸಬೇಕು ಎಂದು ನಿರ್ಧರಿಸಿದ ಆಸಿಫ್ ತಕ್ಷಣ ಅನಿವಾಸಿ ಕನ್ನಡಿಗ, ಉದ್ಯಮಿ ಅಡ್ಡೂರಿನ ಹಿದಾಯತ್‌ರಿಗೆ ವಿಷಯ ತಿಳಿಸಿ ನೆರವು ಕೋರಿದರು. ಕೂಡಲೇ ಹಿದಾಯತ್ ಮತ್ತು ತಂಡ ಕಾರ್ಯಪ್ರವೃತ್ತರಾದರು.

ಯಶವಂತ ಪೂಜಾರಿ ಅಬುಧಾಬಿಯಲ್ಲಿ ಮೃತಪಟ್ಟಿರುವ ವಿಷಯ ತಿಳಿದೊಡನೆ ಈ ತಂಡ ಕಾರ್ಯಪ್ರವೃತ್ತವಾಯಿತು. ಮಗನ ಮೃತದೇಹವನ್ನು ನೋಡಬೇಕು ಎಂಬ ಆ ತಾಯಿಯ ಹಂಬಲ ಈಡೇರಿಸಬೇಕು ಎಂದೂ ನಿರ್ಧರಿಸಿದ ಈ ತಂಡ, ಯಶವಂತ ಎಲ್ಲಿ ಕೆಲಸ ಮಾಡಿಕೊಂಡಿದ್ದರು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಹಲವು ಶವಾಗಾರ ಅಲೆದರೂ ಪ್ರಯೋಜನ ಆಗಲಿಲ್ಲ. ನಂತರ ವಾಟ್ಸ್‌ಆ್ಯಪ್ ಗ್ರೂಪ್ ಒಂದನ್ನು ಮಾಡಿ ಯಶವಂತ ಎಲ್ಲಿ ಕೆಲಸ ಮಾಡಿಕೊಂಡಿದ್ದರು ಎಂಬುದನ್ನು ಪತ್ತೆಹಚ್ಚಿದರು. ಯಶವಂತ ಪೂಜಾರಿಯ ಪಾಸ್‌ಪೋರ್ಟ್, ವೀಸಾದ ಅವಧಿ ಮುಗಿದಿದ್ದವು. ಸುಮಾರು 45 ದಾಖಲೆಗಳನ್ನು ಸಿದ್ಧಪಡಿಸಬೇಕಿತ್ತು. ಭಾರತದ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸಿದರು. ಈ ಮಧ್ಯೆ ಮರಣೋತ್ತರ ಪರೀಕ್ಷೆ ಮಾತ್ರವಲ್ಲದೆ ಕೋವಿಡ್-19 ಪರೀಕ್ಷೆಯನ್ನೂ ನಡೆಸಲಾಯಿತು. ವರದಿ ನೆಗೆಟಿವ್ ಬಂದಿತ್ತು. ಸತತ ಪ್ರಯತ್ನದ ಫಲವಾಗಿ ಜೂ.20(ಶನಿವಾರ)ರಂದು ಮೃತದೇಹವನ್ನು ಕಳುಹಿಸಿಕೊಡಲಾಗಿದೆ. ರವಿವಾರ ತವರೂರು ತಲುಪಲಿದೆ.

ಇದಕ್ಕಾಗಿ ಊರಿನಲ್ಲಿ ಆಸಿಫ್ ಸೂರಲ್ಪಾಡಿ, ಮುಝಮ್ಮಿಲ್ ನೂಯಿ, ಭಾಗ್ಯರಾಜ್, ರಾಜೇಶ್ ಮರೋಳಿ, ದೀಪಕ್ ಮಂಗಳೂರು, ನ್ಯಾಯವಾದಿ ಉಲ್ಲಾಸ್ ಪಿಂಟೊ ಸಹಕರಿಸಿದ್ದರೆ, ಅನಿವಾಸಿ ಕನ್ನಡಿಗರ ಪೈಕಿ ಶ್ರೀಧರ್, ರಶೀದ್ ಬಿಜೈ, ಸಿರಾಜುದ್ದೀನ್ ಪರ್ಲಡ್ಕ, ಪ್ರದೀಪ್ ಕಿರೋಡಿಯನ್, ದಯಾ ಕಿರೋಡಿಯನ್, ನವೀದ್ ಮಾಗುಂಡಿ, ಪ್ರವೀಣ್ ಶೆಟ್ಟಿ, ಬಶೀರ್ ಕೊಡ್ಲಿಪೇಟೆ, ಶರೀಫ್ ಸರ್ವೆ, ಇಮ್ರಾನ್ ಖಾನ್ ಎರ್ಮಾಳ್, ದೀಪಾ ಪೂಜಾರಿ ಸಹಿತ ಹಲವರು ಕೈಜೋಡಿಸಿದ್ದಾರೆ.

ಊರ ಹುಡುಗನಿಗಾಗಿ ಎಲ್ಲರೂ ಒಂದಾದರು

‘ವಾರ್ತಾಭಾರತಿ’ಯ ಅಬುಧಾಬಿಯ ಓದುಗರು ಯಶವಂತ ಪೂಜಾರಿಯ ಸಾವಿನ ಸುದ್ದಿ ತಿಳಿದ ತಕ್ಷಣ ಫೇಸ್‌ಬುಕ್ ಖಾತೆಯ ಮೂಲಕ ಯಶವಂತ ಪೂಜಾರಿಯ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದರು. ಹಾಗೇ ಉದ್ಯಮಿ ಸೂರಲ್ಪಾಡಿ ಆಸಿಫ್‌ರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳೀಯ ದೇವದಾಸ್‌ರಿಗೆ ಮಾಹಿತಿ ನೀಡಿದರು. ದೇವದಾಸರು ಕೈಕಂಬದ ರೋಝಾ ಮಿಸ್ಟಿಕಾ ಶಾಲೆಯ ಶಿಕ್ಷಕಿ ಶ್ಯಾಮಲಾರಿಗೆ ವಿಷಯ ತಿಳಿಸಿದರು. ಅವರು ಸ್ಥಳೀಯರೇ ಆದ ಭಾಗ್ಯರಾಜ್‌ಗೆ ಮಾಹಿತಿ ನೀಡಿದರು. ಹೀಗೆ ಆಸಿಫ್, ದೇವರಾಜ್, ಭಾಗ್ಯರಾಜ್‌ರ ಪ್ರಯತ್ನಫಲವಾಗಿ ಯಶವಂತ ಪೂಜಾರಿಯ ಅಡ್ಡೂರಿನ ಮನೆಯನ್ನು ಪತ್ತೆ ಚ್ಚಿ ತಾಯಿಗೆ ವಿಷಯ ತಿಳಿಸಿದರು.

ಒಟ್ಟಿನಲ್ಲಿ ಊರಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕೂಡ ಜಾತಿ, ಮತ ಭೇದ ಮರೆತು ಮಾನವೀಯ ದೃಷ್ಟಿಯಿಂದ ಕೆಲಸ ಮಾಡಿದುದರ ಫಲದಿಂದ ಯುವಕನ ಮೃತದೇಹ ತವರೂರು ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News