ಲಾಕ್‌ಡೌನ್: ಚೆನ್ನೈನಲ್ಲಿ ಮಾಂಸ, ಮೀನು ಮಾರಾಟ ನಿಷೇಧ

Update: 2020-06-20 16:28 GMT

 ಚೆನ್ನೈ, ಜೂ.21: ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಚೆನ್ನೈ ಮಹಾನಗರದಲ್ಲಿ ಜೂನ್ 30ರವರೆಗೆ ಲಾಕ್‌ಡೌನ್ ಹೇರಲಾಗಿರುವ ಅವಧಿಯಲ್ಲಿ ಎಲ್ಲಾ ಕಸಾಯಿಖಾನೆಗಳು, ಮೀನು,ಮಾಂಸ ಹಾಗೂ ಕೋಳಿ ಮಾರಾಟದ ಅಂಗಡಿಗಳನ್ನು ಮುಚ್ಚುಗಡೆಗೊಳಿಸಿದೆ. ಈ ಸ್ಥಳಗಳಲ್ಲಿ ವಿಶೇಷವಾಗಿ ವಾರಾಂತ್ಯದಲ್ಲಿ ವಿಪರೀತ ಜನದಟ್ಟಣೆ ಇರುವುದರಿಂದ ಸೋಂಕು ಹರಡುವ ಅಪಾಯದ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಮೂಲಗಳು ತಿಳಿಸಿವೆ.

   ಈ ಮಧ್ಯೆ ಮೀನು, ಮಾಂಸ ಅಲಭ್ಯತೆಯ ಹಿನ್ನೆಲೆಯಲ್ಲಿ ನಗರದ ಬಹುತೇಕ ಮಾಂಸಾಹಾರಿ ರೆಸ್ಟಾರೆಂಟ್‌ಗಳು ಕೂಡಾ ಮಾಂಸಹಾರ ಖಾದ್ಯಗಳನ್ನು ತಮ್ಮ ಮೆನುವಿನಿಂದ ತೆಗೆದುಹಾಕಿವೆ.

 ಆದಾಗ್ಯೂ ಕೋಳಿಸಾಕಣಾ ಕೇಂದ್ರಗಳಿಂದ ಕೋಳಿಗಳನ್ನೇ ನೇರವಾಗಿ ತರಿಸಿಕೊಳ್ಳುವ ಮಾಂಸಹಾರಿ ರೆಸ್ಟೊರೆಂಟ್‌ಗಳಿಗೆ ಮಾತ್ರ ತಮ್ಮ ಗ್ರಾಹಕರಿಗೆ ಕೋಳಿಮಾಂಸದ ಖಾದ್ಯಗಳನ್ನು ಪೂರೈಕೆ ಮಾಡಲು ಸಾಧ್ಯವಾಗಲಿದೆ. ಆದರೆ ಲಾಕ್‌ಡೌನ್ ಕಾರಣದಿಂದಾಗಿ ಗ್ರಾಮಾಂತರಪ್ರದೇಶಗಳಲ್ಲಿರುವ ಪೌಲ್ಟ್ರಿಗಳಿಂದ ಚೆನ್ನೈಗೆ ಶೀತಲೀಕರಣದ ವ್ಯವಸ್ಥೆಯಿರುವ ಟ್ರಕ್‌ಗಳಿಂದ ಕೋಳಿಮಾಂಸವನ್ನು ತರಲು ಇ-ಪಾಸ್‌ಗಳನ್ನು ರೆಸ್ಟಾರೆಂಟ್‌ಗಳು ಪಡೆದುಕೊಳ್ಳಬೇಕಿದೆ.

ಕಸಾಯಿಖಾನೆಗಳು ಹಾಗೂ ಮಟನ್ ಆಂಗಡಿಗಳ ಮುಚ್ಚುಗಡೆಯಿಂದಾಗಿ ಈ ಮಧ್ಯೆ ವಾರಾಂತ್ಯದಲ್ಲಿ ಭರ್ಜರಿ ವಹಿವಾಟು ನಡೆಸುತ್ತಿದ್ದ ನಗರದ ಡಜನ್‌ಗಟ್ಟಳೆ ಬಿರಿಯಾನಿ ಹೊಟೇಲ್‌ಗಳು ಕೂಡಾ ಬಾಧಿತವಾಗಲಿವೆ.

 ‘‘ನಗರದ ಶೇ.90ರಷ್ಟು ಜನರು ಮಾಂಸಹಾರಿಗಳಾಗಿದ್ದು, ಪ್ರೊಟೀನ್ ಆಹಾರದಿಂದ ಅವರನ್ನು ಯಾಕೆ ವಂಚಿತರನ್ನಾಗಿಸಬೇಕು? ಒಂದು ವೇಳೆ ಮಾಂಸದ ಅಂಗಡಿಗಳಲ್ಲಿ ಜನಸಂದಣಿಯು ಸಮಸ್ಯೆಯಾಗಿದ್ದರೆ ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಅದರ ಹೊರತು ಮಾಂಸದಂಗಡಿಗಳನ್ನು ನಿಷೇಧಿಸುವುದು ಸಮಸ್ಯೆಗೆ ಪರಿಹಾರವಲ್ಲ ಎದಂದು ನಗರದ ಜಿಮ್ ಶಿಕ್ಷಕ ಜಯಪ್ರಕಾಶ್ ಹೇಳುತ್ತಾರೆ.

ಮೀನುಮಾರಾಟದ ಮೇಲಿನ ನಿಷೇಧವೂ ಮೀನುಗಾರರು ಮತ್ತು ಮೀನುವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಲವಾರು ಮಂದಿ ಮೀನುಗಾರರು ಮಾರಾಟವಾಗದೆ ಕೊಳೆತ ಮೀನುಗಳನ್ನು ಕಸದಗುಂಡಿಗೆ ಚೆಲ್ಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News