ಬ್ರಹ್ಮಾವರ ಪಟ್ಟಣದ ಯೋಜನಾ ಬದ್ಧ ಅಭಿವೃದ್ಧಿಗೆ ತೀರ್ಮಾನ

Update: 2020-06-20 17:09 GMT

ಉಡುಪಿ, ಜೂ.20: ಬ್ರಹ್ಮಾವರ ಪಟ್ಟಣದ ಯೋಜನಾ ಬದ್ಧ ಅಭಿವೃದ್ಧಿಗಾಗಿ ಉಡುಪಿ ವಲಯ ನಿಯಮಾವಳಿಗೆ ಅನುಗುಣವಾಗಿ ಸೂಕ್ತ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಬದಲಾವಣೆಗಳನ್ನು ಮಾಡುವ ಬಗ್ಗೆ ಆದಿಉಡುಪಿಯಲ್ಲಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಂದು ಕರೆಯಲಾದ ಬ್ರಹ್ಮಾವರ ಯೋಜನಾ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬ್ರಹ್ಮಾವರ ಪಟ್ಟಣಕ್ಕೆ ಹೊಸದಾಗಿ ಸ್ಥಳೀಯ ಯೋಜನಾ ಪ್ರದೇಶ ಘೋಷಿಸಿ ಹೊರಡಿಸಿದ ಸರ್ಕಾರದ ಆದೇಶದ ಬಗ್ಗೆ ಮತ್ತು ಬ್ರಹ್ಮಾವರ ಯೋಜನಾ ಪ್ರಾಧಿಕಾರದ ಕಾರ್ಯವನ್ನು ಪ್ರಾರಂಭಿಸುವ ಬಗ್ಗೆ ಚರ್ಚಿಸಲಾಯಿತು.

ಬ್ರಹ್ಮಾವರ ಪ್ರಾಧಿಕಾರದ ವ್ಯಾಪ್ತಿಯಲ್ಲಿ 700 ಚದರ ಅಡಿವರೆಗೆ ಮನೆ ನಿರ್ಮಿಸಲು ಗ್ರಾಪಂನಿಂದಲೇ ಕಟ್ಟಡ ಪರವಾನಗಿ ಪಡೆಯಲು ತೀರ್ಮಾನಿಸಲಾಯಿತು. ಈ ಹಿಂದೆ ಗ್ರಾಪಂಗಳಿಂದ ಅನುಮೋದನೆ ಪಡೆದಂತಹ ನಿವೇಶನಗಳಿಗೆ ಹಾಗೂ ಕಟ್ಟಡಗಳಿಗೆ ಮುಂದಕ್ಕೆ ಪ್ರಾಧಿಕಾರದಿಂದ ನೇರವಾಗಿ ಕಟ್ಟಡ ಪರವಾನಿಗೆ ನೀಡಲು ಸೂಕ್ತ ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು.

ಸಿಆರ್‌ಝಡ್ ನಿಯಮಾವಳಿಗಳಲ್ಲಿ ಬದಲಾವಣೆ ಆಗಿರುವ ಬಗ್ಗೆ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲು ಸೂಚಿಸಲಾಯಿತು. ಏಕ ನಿವೇಶನ ಹಾಗೂ ಒಂದು ಎಕ್ರೆವರೆಗೆ ಬರುವ ವಿನ್ಯಾಸ ನಕ್ಷೆಗಳಿಗೆ ಪ್ರಾಧಿಕಾರದಿಂದ ನೇರ ಅನುಮೋದನೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಕುಂದಾಪುರದ ಸಹಾಯಕ ಆಯುಕ್ತ ಹಾಗೂ ಬ್ರಹ್ಮಾವರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ರಾಜು, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಚಾಂತಾರು, ವಾರಂಬಳ್ಳಿ, ಹಂದಾಡಿ, ಬೈಕಾಡಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News