​ಗಡಿಯಲ್ಲಿ 8 ಕಿ.ಮೀ. ರಸ್ತೆ ತಡೆದ ಚೀನಾ ಸೇನೆ

Update: 2020-06-21 03:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ.21: ಭಾರತದ ಒಂದಿಂಚು ಜಾಗವನ್ನೂ ಚೀನಾ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರೂ, ಗಲ್ವಾನ್ ಕಣಿವೆ ಪ್ರದೇಶದ ವಾಸ್ತವ ಸ್ಥಿತಿ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಭಾರತ ತನ್ನ ಭೂಭಾಗವೆಂದು ಪ್ರತಿಪಾದಿಸುತ್ತಿರುವ ಸುಮಾರು ಎಂಟು ಕಿಲೋಮೀಟರ್ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡು ಅಲ್ಲಿ ಬಂಕರ್‌ಗಳನ್ನು ನಿರ್ಮಿಸಿದೆ ಎಂಬ ಸಂದೇಹ ಬಲವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಫಿಂಗರ್-4 ಟೂ 8 ಮೇಲೆ ತನ್ನ ಪ್ರಾಬಲ್ಯ ಸ್ಥಾಪಿಸುವ ಸಲುವಾಗಿ ಪ್ಯಾಂಗಾಂಗ್ ತ್ಸೋ ನದಿಯ ಉತ್ತರ ದಂಡೆಯ ಅತ್ಯುನ್ನತ ಶಿಖರಗಳನ್ನು ಕೂಡಾ ನಿಯಂತ್ರಣಕ್ಕೆ ಪಡೆದಿವೆ ಎನ್ನಲಾಗಿದೆ. ಗಲ್ವಾನ್ ಕಣಿವೆಯ ಗಸ್ತು ಕೇಂದ್ರ 14, 15 ಮತ್ತು 17ರ ಪ್ರದೇಶದಲ್ಲಿ ಉಭಯ ದೇಶಗಳ ಸೇನೆ ನಡುವೆ ನಡೆದ ಸಂಘರ್ಷದ ಬಗ್ಗೆ ದ್ವಿಪಕ್ಷೀಯ ಮಾತುಕತೆಗಳು ನಡೆಯುವ ಸಂದರ್ಭವನ್ನೇ ಬಳಸಿಕೊಂಡು ಈ ಆಯಕಟ್ಟಿನ ಪ್ರದೇಶಗಳ ಮೇಲೆ ನಿಯಂತ್ರಣ ಸ್ಥಾಪಿಸಿದೆ ಎನ್ನಲಾಗಿದೆ.

ಜೂನ್ 15ರಂದು ಸಂಘರ್ಷ ಸಂಭವಿಸಿ 20 ಯೋಧರು ಹುತಾತ್ಮರಾಗಿ, 76ಕ್ಕೂ ಹೆಚ್ಚು ಮಂದಿ ಗಾಯಗೊಂಡ ಲಗ್ವಾನ್ ಕಣಿವೆಯ ಪಿಪಿ-14 ಪ್ರದೇಶ ಈಗ ಭಾರತೀಯ ಸೇನೆಯ ವಶದಲ್ಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಜೂನ್ 15ರ ರಾತ್ರಿ ನಡೆದ ಸಂಘರ್ಷದ ಬಳಿಕ ಭಾರತೀಯ ಹಾಗೂ ಚೀನಿ ಸೇನೆಗಳು ಈ ಪ್ರದೇಶದಿಂದ ನಿರ್ಗಮಿಸಿವೆ ಎಂದು ಭಾರತ ಸ್ಪಷ್ಟನೆ ನೀಡಿದೆ.

ಎರಡೂ ಪ್ರತಿಸ್ಪರ್ಧಿ ಸೇನೆಗಳು ಬಹುತೇಕ ತಮ್ಮ ವಾಸ್ತವ ನಿಯಂತ್ರಣ ರೇಖೆ ಪ್ರದೇಶದಲ್ಲೇ ಇವೆ. ಆದರೆ ಉಭಯ ದೇಶಗಳು ತಮ್ಮ ಪ್ರದೇಶಗಳಲ್ಲಿ ನಿರ್ಮಿಸಿಕೊಂಡಿರುವ ಮಿಲಿಟರಿ ವ್ಯವಸ್ಥೆಯಿಂದ ಹಿಂದೆ ಸರಿದಿಲ್ಲ ಎಂದು ಮೂಲಗಳು ಹೇಳಿವೆ.

ಸಮುದ್ರಮಟ್ಟದಿಂದ 13,900 ಅಡಿ ಎತ್ತರದ ಪ್ಯಾಂಗಾಂಗ್ ತ್ಸೋ ನದಿಯ ಉತ್ತರ ದಂಡೆಯಲ್ಲಿ, ಚಾಂಗ್ಲಾ ಪಾಸ್ ಬಳಿ ಪರಿಸ್ಥಿತಿ ಗಂಭೀರವಾಗಿದೆ. ಮೇ 5-6ರಂದು ನಡೆದ ಸಂಘರ್ಷದ ಬಳಿಕ ಚೀನಾ ಸೇನೆ, ಫಿಂಗರ್-4 ಟೂ 8 ಪ್ರದೇಶದಲ್ಲಿ ಭಾರತೀಯ ಪಡೆ ಗಸ್ತು ನಡೆಸದಂತೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಎಂಟು ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರಂತರವಾಗಿ ತಡೆದಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News