ಕೋವಿಡ್ ಕರಿನೆರಳಿನ ನಡುವೆ ಯೋಗ ದಿನದ ಸಂಭ್ರಮ

Update: 2020-06-21 04:25 GMT

ಹೊಸದಿಲ್ಲಿ, ಜೂ.21: ಇಡೀ ವಿಶ್ವಕ್ಕೆ ಕೋವಿಡ್-19 ಸಾಂಕ್ರಾಮಿಕದ ಕರಿನೆರಳು ದಟ್ಟವಾಗಿ ವ್ಯಾಪಿಸಿರುವುದರ ನಡುವೆಯೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಇಂದು ವಿವಿಧೆಡೆ ಆಚರಿಸಲಾಯಿತು. ಆದರೆ ಯಾವುದೇ ಸಾಮೂಹಿಕ ಯೋಗ ಕಾರ್ಯಕ್ರಮಗಳು ಇರಲಿಲ್ಲ.

ಮನೆಯಲ್ಲೇ ಯೋಗ ಎನ್ನುವುದು ಈ ಬಾರಿಯ ಧ್ಯೇಯವಾಕ್ಯವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ  ಮೋದಿ, ಕರ್ನಾಟಕ ರಾಜ್ಯಪಾಲ ವಜು ಭಾಯಿ ವಾಲಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಮಂದಿ ಗಣ್ಯರು ಯೋಗ ದಿನದ ಶುಭ ಹಾರೈಸಿದ್ದು, ಮನೆಗಳಲ್ಲಿ ಯೋಗ ನಿರ್ವಹಿಸಿದರು.

ಪ್ರಾಚೀನ ವಿಜ್ಞಾನವಾಗಿರುವ ಯೋಗ, ವಿಶ್ವಕ್ಕೆ ಸರ್ವಶ್ರೇಷ್ಠ ಕೊಡುಗೆ. ಹೆಚ್ಚು ಹೆಚ್ಚು ಮಂದಿ ಯೋಗವನ್ನು ಅಳವಡಿಸಿಕೊಳ್ಳುತ್ತಿರುವುದು ಸಂತಸದ ವಿಚಾರ. ಕೋವಿಡ್-19ರ ಒತ್ತಡ ಮತ್ತು ಸಂಕಷ್ಟದ ನಡುವೆಯೂ ಯೋಗಾಭ್ಯಾಸ ಮಾಡುವುದು ದೇಹವನ್ನು ಸದೃಢವಾಗಿ ಇಡಲು ಮತ್ತು ಮನಸ್ಸನ್ನು ಶಾಂತವಾಗಿಡಲು ನೆರವಾಗುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೋವಿಡ್-19 ವೈರಸ್ ದಾಳಿ ಮಾಡುವ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಪ್ರಾಣಾಯಾಮ ಬಲಪಡಿಸುತ್ತದೆ ಎಂದು ಹೇಳಿದ್ದಾರೆ. ಯೋಗ ಇಂದು ಏಕತೆಯ ಸಾಧನವಾಗಿದೆ. ಇದು ತಾರತಮ್ಯ ಮಾಡುವುದಿಲ್ಲ; ಧರ್ಮ, ವರ್ಣ, ಲಿಂಗ, ನಂಬಿಕೆ ಹಾಗೂ ದೇಶಗಳ ಗಡಿದಾಟಿ ಇದು ಬೆಳೆದಿದೆ ಎಂದು ವಿವರಿಸಿದ್ದಾರೆ.

ಭಾರತ- ಚೀನಾ ಗಡಿಯಲ್ಲಿ 14 ಸಾವಿರ ಅಡಿ ಎತ್ತರದಲ್ಲಿ ನಿಯೋಜಿತರಾಗಿರುವ ಐಟಿಬಿಪಿ ಸಿಬ್ಬಂದಿ, ಬದರೀನಾಥ್ ಸಮೀಪದ ವಸುಂಧರಾ ಹಿಮನದಿ ಬಳಿ ಯೋಗ ಪ್ರದರ್ಶನ ನೀಡಿದರು.

ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಅವರು ತಮ್ಮ ನಿವಾಸದಲ್ಲೇ ಯೋಗಾಭ್ಯಾಸ ಮಾಡಿದರು. ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ, ವಿವಿಧ ಸಮುದಾಯಗಳ ಜನತೆಯ ಜತೆ ಯೋಗಾಭ್ಯಾಸ ಮಾಡಿದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಾ ಮನೆಯಲ್ಲೇ ಯೋಗಾಭ್ಯಾಸ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News