ಕೋವಿಡ್-19 ಭೀತಿ: ಈ ವರ್ಷದ ಕನ್ವರ್ ಯಾತ್ರೆ ರದ್ದು
Update: 2020-06-21 11:33 IST
ಲಕ್ನೊ, ಜೂ.21: ಕೊರೋನ ವೈರಸ್ ಭೀತಿಯ ಕಾರಣಕ್ಕೆ ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಕನ್ವರ್ ಯಾತ್ರೆ ಈ ವರ್ಷ ರದ್ದುಪಡಿಸಲಾಗಿದೆ ಎಂದು ಅಧಿಕೃತ ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹರ್ಯಾಣ ಹಾಗೂ ಉತ್ತರಾಖಂಡದ ಮುಖ್ಯಮಂತ್ರಿಗಳಾದ ಎಂ.ಎಲ್. ಖಟ್ಟರ್ ಹಾಗೂ ತ್ರಿವೇಂದ್ರ ಸಿಂಗ್ ರಾವತ್ ಜೊತೆಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದರು. ಶ್ರಾವಣ ಮಾಸದಲ್ಲಿ ನಡೆಯುವ ವಾರ್ಷಿಕ ಕನ್ವರ್ ಯಾತ್ರೆಯ ಕುರಿತು ಚರ್ಚೆ ನಡೆಸಿದರು. ಆಯಾ ರಾಜ್ಯಗಳ ಧಾರ್ಮಿಕ ಗುರುಗಳು ಹಾಗೂ ಕನ್ವರ್ ಸಂಘಗಳು ಕೋವಿಡ್-19 ಹಿನ್ನೆಲೆಯಲ್ಲಿ ಯಾತ್ರೆಯನ್ನು ರದ್ದುಪಡಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.