ಉಡುಪಿ, ದ.ಕ. ಜಿಲ್ಲೆಯಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರ
ಉಡುಪಿ/ಮಂಗಳೂರು, ಜೂ.21: ಈ ವರ್ಷದ ಮೊದಲ ಅಪರೂಪದ ಪಾರ್ಶ್ವ ಸೂರ್ಯಗ್ರಹಣವು ದ.ಕ., ಮತ್ತು ಉಡುಪಿ ಜಿಲ್ಲೆಯಲ್ಲಿ ಜೂ.21ರಂದು ಶೇ.40ರಷ್ಟು ಗರಿಷ್ಠ ಸ್ಥಿತಿಯಲ್ಲಿ ಗೋಚರ ಆಗಿದೆ.
ಉಡುಪಿಯಲ್ಲಿ ಪೂರ್ವಾಹ್ನ 11:27ರ ಸುಮಾರಿಗೆ ಹಾಗೂ ದ.ಕ. ಜಿಲ್ಲೆಯ ಮಂಗಳೂರಿನಲ್ಲಿ 11.36ರ ಸುಮಾರಿಗೆ ಗರಿಷ್ಠ ಶೇ.40ರಷ್ಟು ಗೋಚರಿಸಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ನಿಖರವಾದ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸಿದೆ. ಉಡುಪಿಯಲ್ಲಿ ಸೂರ್ಯನ ಶೇ.40ರಷ್ಟು ಭಾಗವನ್ನು ಚಂದ್ರ ಆವರಿಸಿರುವುದರಿಂದ ಖಂಡಗ್ರಾಸ ಗ್ರಹಣ ಕಾಣಿಸಿದೆ. ಬೆಳಗ್ಗೆ 10:04ಕ್ಕೆ ಪ್ರಾರಂಭವಾದ ಗ್ರಹಣ 1:22ಕ್ಕೆ ಮುಕ್ತಾಯಗೊಂಡಿತು.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದಿಂದ ಸೂರ್ಯಗ್ರಹಣವನ್ನು ಟೆಲಿಸ್ಕೋಪ್ ಫಿಲ್ಟರ್, ಕನ್ನಡಕ ಮತ್ತು ವೆಲ್ಡಿಂಗ್ ಗ್ಲಾಸ್ ಮೂಲಕ ವೀಕ್ಷಿಸಲಾಯಿತು. ಇಲ್ಲಿಂದಲೇ ಯೂಟ್ಯೂಬ್‌ನಲ್ಲಿ ಗ್ರಹಣದ ನೇರ ಪ್ರಸಾರವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಸಂಯೋಜಕ ಡಾ.ಎ.ಪಿ.ಭಟ್, ಸಂಯೋಜಕ ಅತುಲ್ ಭಟ್, ಕಾಲೇಜಿನ ಪ್ರಾಂಶುಪಾಲ ಡಾ.ಎ.ರಾಘ ವೇಂದ್ರ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ದ.ಕ.: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ರವಿವಾರ ಮೋಡ ಕವಿದ ವಾತಾವರಣದ ನಡುವೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದೆ.
ಸೌರವ್ಯೆಹದ ಕೌತುಕವಾಗಿರುವ ಸೂರ್ಯಗ್ರಹಣವು 11.36ರ ಸುಮಾರಿಗೆ ಗರಿಷ್ಠ ಶೇ.40ರಷ್ಟು ಗೋಚರಿಸಿದೆ. ದ.ಕ. ಜಿಲ್ಲೆಯಲ್ಲಿ ಕಂಕಣ ಸೂರ್ಯ ಗ್ರಹಣ ಇಲ್ಲಿ ಗೋಚರಿಸಲಿಲ್ಲ. ಮಧ್ಯಾಹ್ನ 1:19 ಸುಮಾರಿಗೆ ಸೂರ್ಯ ಗ್ರಹಣ ಮುಕ್ತಾಯಗೊಂಡಿದೆ.
ಮಂಗಳೂರು ನಗರದ ಆಕಾಶ ಭವನದಲ್ಲಿ ಚಿಂತನ ಸಾಂಸ್ಕೃತಿಕ ಬಳಗದಿಂದ ವಿಜ್ಞಾನ ಶಿಕ್ಷಕ ಅರವಿಂದ ಕುಡ್ಲ ನೇತೃತ್ವದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭ ಅರವಿಂದ ಅವರು ಗ್ರಹಣದ ಬಗ್ಗೆ ವಿವರಣೆ ನೀಡಿದರು