ಪೊಲೀಸ್ ಇಲಾಖೆ ಸಂಪೂರ್ಣ ವಿಫಲ: ಎಸ್‌ಡಿಪಿಐ ಆರೋಪ

Update: 2020-06-21 13:42 GMT

ಮಂಗಳೂರು, ಜೂ.21: ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸಂಘಪರಿವಾರದ ಗೂಂಡಾಗಿರಿ ಮಿತಿ ಮೀರುತ್ತಿದೆ. ವಾರದ ಹಿಂದೆ ಜೋಕಟ್ಟೆಯ ಜಾನುವಾರು ವ್ಯಾಪಾರಿಯ ಮೇಲೆ ಕೊಟ್ಟಾರದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಕೌರ್ಯ ಮೆರೆದ ಘಟನೆ ಮಾಸುವ ಮುನ್ನವೇ ಕುದ್ರೋಳಿ ಕಸಾಯಿಖಾನೆಯಿಂದ ಅಧಿಕೃತ ದಾಖಲೆಯ ಮೂಲಕ ಕಂಕನಾಡಿ ಮಾರ್ಕೆಟ್‌ಗೆ ಮಾಂಸ ಸಾಗಾಟ ಮಾಡುತ್ತಿದ್ದಾಗ ಹೈಲ್ಯಾಂಡ್ ಆಸ್ಪತ್ರೆಯ ಬಳಿ ಸಂಘಪರಿವಾರದ ಗೂಂಡಾಗಳು ಬೈಕ್ ಮತ್ತು ಕಾರಿನಲ್ಲಿ ಬಂದು ಟೆಂಪೋವನ್ನು ತಡೆದು ನಿಲ್ಲಿಸಿ ಚಾಲಕ ರಶೀದ್‌ನ ಮೇಲೆ ಹಲ್ಲೆ ನಡೆಸಿ ವಾಹನವನ್ನು ಹಾನಿಗೊಳಿಸಿ ಸೀಮೆಎಣ್ಣೆ ಸುರಿಯುವ ಮೂಲಕ ಗೂಂಡಾಗಿರಿ ಎಸಗಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಹೈಲ್‌ಖಾನ್ ಆರೋಪಿಸಿದ್ದಾರೆ.

ಕೊಟ್ಟಾರದಲ್ಲಿ ನಡೆದ ಘಟನೆಯಲ್ಲಿ ಪೊಲೀಸರು ಆರೋಪಿಗಳಿಗೆ ಲಘು ಸೆಕ್ಷನ್ ಹಾಕಿ ಜಾಮೀನಿನ ಮೇಲೆ ತಕ್ಷಣ ಬಿಡುಗಡೆಗೊಳಿಸಿದ್ದೆ ಈ ರೀತಿಯ ಘಟನೆ ಪುನರಾವರ್ತನೆಯಾಗಲು ಮತ್ತು ಸಂಘಪರಿವಾರದ ಗೂಂಡಾಗಳು ಬೆಳೆಯಲು ಕಾರಣವಾಗಿದೆ. ಇಂತಹ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ಜಿಲ್ಲೆಯ ಸ್ವಾಸ್ಥ್ಯವನ್ನು ಕೆಡಿಸುವ ಗೂಂಡಾಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News