ಮಂಗಳೂರು: ಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಗೆ ಹಲ್ಲೆ ಪ್ರಕರಣ; ಐವರು ಆರೋಪಿಗಳ ಸೆರೆ
ಮಂಗಳೂರು,ಜೂ.21:ನಗರದ ಕುದ್ರೋಳಿಯ ವಧಾಗೃಹದಿಂದ ಕಂಕನಾಡಿ ಮತ್ತು ಜೆಪ್ಪು ಮಾರುಕಟ್ಟೆಗಳಿಗೆ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡವೊಂದು ಚಾಲಕನಿಗೆ ಹಲ್ಲೆಗೈದು, ಟೆಂಪೋವನ್ನು ಮಗುಚಿ ಹಾಕಿ, ಮಾಂಸಕ್ಕೆ ಪೆಟ್ರೋಲ್ ಸುರಿದ ಕೃತ್ಯಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ದೀಕ್ಷಿತ್ ಕುಮಾರ್ (19) ಮತ್ತು ಕುಚ್ಚಿಗುಡ್ಡೆಯ ರಾಜು ಪೂಜಾರಿ (19), ಮಂಗಳೂರಿನ ಅತ್ತಾವರದ ಸಂತೋಷ್ ಕುಮಾರ್ (31) ಮತ್ತು ಬಾಲಚಂದ್ರ (28) ಹಾಗೂ ಉಳ್ಳಾಲದ ರಕ್ಷಿತ್ ಪೂಜಾರಿ (22) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣೆಯ ಪೊಲೀಸರು ಅರೋಪಿಗಳ ವಿರುದ್ಧ ಅಕ್ರಮ ಕೂಟ, ದೊಂಬಿ ಮಾಡುವ ಉದ್ದೇಶ, ಮಾರಾಕಾಯುಧ ಬಳಕೆ, ಅಕ್ರಮ ತಡೆ, ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಇತ್ಯಾದಿಯಾಗಿ ಸೆ.142,147,148,149,322,341,427, 506 ಅಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ವಿವರ: ಕುದ್ರೋಳಿಯ 57ರ ಹರೆಯದ ಅಬ್ದುಲ್ ರಶೀದ್ ಎಂಬವರು ಕುದ್ರೋಳಿ ಕಸಾಯಿಖಾನೆಯಲ್ಲಿ ಪಶು ವೈದ್ಯರ ಅಧಿಕೃತ ದೃಢೀಕರಣ ಪತ್ರ ಪಡೆದು ವಧಿಸಲ್ಪಟ್ಟ ಗೋವಿನ ಸುಮಾರು 90 ಕೆಜಿ ಮಾಂಸವನ್ನು ತನ್ನ ರಿಕ್ಷಾ ಟೆಂಪೋದಲ್ಲಿ ಕಂಕನಾಡಿ ಮತ್ತು ಜೆಪ್ಪು ಮಾರುಕಟ್ಟೆಯ ಬೀಫ್ ಸ್ಟಾಲ್ ಗೆ ರವಿವಾರ ಬೆಳಗ್ಗೆ ಸುಮಾರು 6:30ಕ್ಕೆ ಸಾಗಾಟ ಮಾಡುತ್ತಿದ್ದರು. ಹೈಲ್ಯಾಂಡ್ ಆಸ್ಪತ್ರೆಯಾಗಿ ಕಂಕನಾಡಿ ಮಾರುಕಟ್ಟೆಯತ್ತ ಚಲಿಸುತ್ತಿದ್ದ ಟೆಂಪೋವನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳ ತಂಡವು ಟೆಂಪೋ ಚಾಲಕ ರಶೀದ್‌ರೊಂದಿಗೆ ಮಾತಿನ ಚಕಮಕಿ ನಡೆಸಿ ಹಲ್ಲೆ ನಡೆಸಿತು. ಅಲ್ಲದೆ ಚಾಲಕ ರಶೀದ್‌ರನ್ನು ಎಳೆದಾಡಿ, ರಿಕ್ಷಾ ಟೆಂಪೋವನ್ನು ಮಗುಚಿ ಹಾಕಿ, ಗಾಜಿಗೆ ಹಾನಿಗೈದರಲ್ಲದೆ ಮಾಂಸಕ್ಕೆ ಪೆಟ್ರೋಲ್ ಸುರಿದಿದ್ದಾರೆ. ಸಾರ್ವಜನಿಕರು ಅದೇ ರಸ್ತೆಯಾಗಿ ಬರುವುದನ್ನು ಕಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ.
ನಾನು ಕಳೆದ 10 ವರ್ಷದಿಂದ ಪ್ರತೀ ದಿನ ಮುಂಜಾನೆ ಇದೇ ರಸ್ತೆಯಾಗಿ ಬಾಡಿಗೆ ರಿಕ್ಷಾ ಟೆಂಪೋದಲ್ಲಿ ಮಾಂಸವನ್ನು ಸಾಗಾಟ ಮಾಡುತ್ತಿದ್ದೇನೆ. ಇಂತಹ ಕಹಿ ಅನುಭವ ನನಗೆ ಯಾವತ್ತೂ ಆಗಿಲ್ಲ. ಹೈಲ್ಯಾಂಡ್ ಆಸ್ಪತ್ರೆ ದಾಟಿ ಕಂಕನಾಡಿ ಮಾರುಕಟ್ಟೆಯತ್ತ ಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ನನ್ನ ರಿಕ್ಷಾ ಟೆಂಪೊವನ್ನು ತಡೆದು ನಿಲ್ಲಿಸಿ ಬೈಯತೊಡಗಿದರು. ಯಾಕೆ, ಏನಾಯಿತು ಎಂದು ಕೇಳಿದಾಗ ಮಾಂಸ ಸಾಗಾಟ ಮಾಡುತ್ತೀಯಾ ಎಂದು ಕೇಳಿ ಆಕ್ಷೇಪಿಸಿದರು. ಅಲ್ಲದೆ ನನಗೆ ಹಲ್ಲೆ ನಡೆಸಲು ಮುಂದಾದಾಗ ಅವರನ್ನು ಎದುರಿಸಲು ಸಜ್ಜಾದೆ. ಅಷ್ಟರಲ್ಲಿ ಅಲ್ಲೇ ಒಂದು ಕಾರು ಕೂಡ ನಿಂತಿತು. ಅದರಲ್ಲೂ ನಾಲ್ಕೈದು ಮಂದಿ ಇದ್ದರು. ನನ್ನ ಕತ್ತಿನ ಪಟ್ಟಿ ಹಿಡಿದು ಹಲ್ಲೆಗೈದು ದೂಡಿ ಹಾಕಿದರು. ನಾನು ಪ್ರತಿರೋಧ ತೋರುತ್ತಿದ್ದಂತೆಯೇ ರಿಕ್ಷಾವನ್ನು ರಸ್ತೆಯಲ್ಲೇ ಮಗುಚಿ ಹಾಕಿ ಅದರ ಗಾಜಿಗೆ ಹಾನಿಯನ್ನುಂಟು ಮಾಡಿದರು. ಅಲ್ಲದೆ ಟೆಂಪೋ ರಿಕ್ಷಾಕ್ಕೆ ಪೆಟ್ರೋಲ್ ಸುರಿಯಲು ಪ್ರಯತ್ನಿಸಿದರು. ನಾನು ತಡೆದಾಗ ಮಾಂಸಕ್ಕೆ ಪೆಟ್ರೋಲ್ ಸುರಿದರು. ನಂತರ ಸಾರ್ವಜನಿಕರು ಜಮಾಯಿಸುವುದನ್ನು ಕಂಡು ಓಡಿ ಪರಾರಿಯಾದರು ಎಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಚಾಲಕ ರಶೀದ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.