ದ.ಕ.ದಲ್ಲಿ ರವಿವಾರ ಏಳು ಮಂದಿಗೆ ಕೊರೋನ ಸೋಂಕು ದೃಢ
ಮಂಗಳೂರು, ಜೂ.21: ದ.ಕ. ಜಿಲ್ಲೆಯಲ್ಲಿ ರವಿವಾರ ಮತ್ತೆ ಏಳು ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಜೊತೆಗೆ, ಮಹಿಳೆ ಸೇರಿದಂತೆ 17 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.
ಜೂ.17ರಂದು ಕುವೈತ್‌ನಿಂದ ಬಂದಿದ್ದ ಮೂವರು, ಪಿ-6618ರ ಸಂಪರ್ಕದಲ್ಲಿದ್ದ 30 ವರ್ಷದ ಮಹಿಳೆ ಹಾಗೂ 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಪುತ್ತೂರಿನ 70 ವರ್ಷದ ವೃದ್ಧನನ್ನು ‘ಇನ್‌ಫ್ಲೂಯೆಂಝಾ ಲೈಕ್ ಇಲ್‌ನೆಸ್’ ಪ್ರಕರಣವೆಂದು ಪರಿಗಣಿಸಲಾಗಿದೆ. ಇನ್ನು 56 ವರ್ಷದ ಬೆಳ್ತಂಗಡಿಯ ವ್ಯಕ್ತಿಯನ್ನು ‘ಸೆವೆರ್ ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್ ಪ್ರಕರಣಕ್ಕೆ ಸೇರ್ಪಡೆಗೊಳಿಸಲಾಗಿದೆ. ಸೋಂಕಿತರೆಲ್ಲರೂ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
17 ಮಂದಿ ಗುಣಮುಖ: ದಿನದಿಂದ ದಿನಕ್ಕೆ ಸೋಂಕಿತರಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಮಾಧಾನಕರ ಅಂಶವಾಗಿದೆ. ಈ ನಡುವೆ ರವಿವಾರ ವೆನ್ಲಾಕ್ ಆಸ್ಪತ್ರೆಯಿಂದ 17 ಮಂದಿ ಕೊರೋನದಿಂದ ಗುಣಮುಖರಾಗಿದ್ದಾರೆ. ಗುಣಮುಖರಾದವರಲ್ಲಿ 22ರಿಂದ 55 ವರ್ಷದೊಳಗಿನವರಿದ್ದಾರೆ. ಇದರೊಂದಿಗೆ 238 ಮಂದಿ ಸೋಂಕು ಮುಕ್ತರಾದಂತಾಗಿದೆ.
ಐಸಿಯುನಲ್ಲಿ ಇಬ್ಬರು: ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ 70 ವರ್ಷದ ವ್ಯಕ್ತಿಯೊಬ್ಬರು ಮಧುಮೇಹ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋರ್ವ 52 ವರ್ಷ ವಯಸ್ಸಿನ ವ್ಯಕ್ತಿ ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿದ್ದು ಐಸಿಯುನಲ್ಲಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 433ಕ್ಕೆ ಏರಿಕೆಯಾಗಿದ್ದು, ಈ ಪೈಕಿ 10 ಮಂದಿ ಹೊರ ಜಿಲ್ಲೆಯವರು. ರವಿವಾರ ಒಟ್ಟು 132 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ ಏಳು ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 294 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 218 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ.