×
Ad

ಗಡಿ ಉದ್ವಿಗ್ನತೆ ನಿವಾರಣೆಗೆ ಭಾರತ, ಚೀನಾದೊಂದಿಗೆ ಮಾತುಕತೆ: ಟ್ರಂಪ್ ಘೋಷಣೆ

Update: 2020-06-21 20:23 IST

ವಾಶಿಂಗ್ಟನ್, ಜೂ. 21: ತಮ್ಮ ಗಡಿ ಉದ್ವಿಗ್ನತೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುವಂತೆ ಭಾರತ ಮತ್ತು ಚೀನಾಗಳೆರೆಡರೊಂದಿಗೂ ಅಮೆರಿಕ ಮಾತುಕತೆ ನಡೆಸುತ್ತಿದೆ ಎಂದು ಆ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದರು.

‘‘ಇದೊಂದು ಅತ್ಯಂತ ಕಠಿಣ ಪರಿಸ್ಥಿತಿ. ನಾವು ಭಾರತದೊಂದಿಗೆ ಮಾತನಾಡುತ್ತಿದ್ದೇವೆ. ನಾವು ಚೀನಾದೊಂದಿಗೂ ಮಾತನಾಡುತ್ತಿದ್ದೇವೆ. ಆ ದೇಶಗಳು ಅಲ್ಲಿ ದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿವೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ಅವರು ಅಲ್ಲಿ ಹೊಡೆದಾಡಿಕೊಂಡಿದ್ದಾರೆ. ಏನಾಗುತ್ತದೆ ಎಂದು ನಾವು ನೋಡುತ್ತೇವೆ. ಅವರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ’’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ನುಡಿದರು. ಅವರು ಓಕ್ಲಹಾಮ ರಾಜ್ಯದ ಟಲ್ಸ ನಗರದಲ್ಲಿನ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪೂರ್ವ ಲಡಾಖ್‌ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತದ ಭೂಭಾಗಕ್ಕೆ ಚೀನೀ ಸೈನಿಕರು ನುಗ್ಗಿರುವುದನ್ನು ವಿರೋಧಿಸಿ ಇಡೀ ಅಮೆರಿಕ ಆಡಳಿತವೇ ಭಾರತದ ಪರವಾಗಿ ನಿಂತಿದೆ.

ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಭೀಕರ ಮುಖಾಮುಖಿಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದಾರೆ. ಚೀನೀ ಸೈನಿಕರ ಸಂಭಾವ್ಯ ಸಾವು-ನೋವುಗಳನ್ನು ಚೀನಾ ಈವರೆಗೆ ಪ್ರಕಟಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News