ಮಾದರಿಯಾದ ಶರೀಫ್-ಸೀತಾರಾಮ ಶೆಟ್ಟರ ಮಾನವೀಯ ಸಂಬಂಧ

Update: 2020-06-21 16:15 GMT

#25 ವರ್ಷಗಳ ಹಿಂದಿನ ಅಪಘಾತದಲ್ಲಿ ಸೌಹಾರ್ದದ ಪಾಠ

ಮಂಗಳೂರು: ಸುಮಾರು 25 ವರ್ಷಗಳ ಹಿಂದೆ ಪಣಂಬೂರು ಬಂದರು ಪ್ರದೇಶದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಭೀಕರ ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ದಂಪತಿ ಇದ್ದ ಕಾರಿನ ಹಿಂದೆ ಚಲಿಸುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಈ ಘಟನೆಯನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದರು. ಕೂಡಲೇ ತನ್ನ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯನ್ನು ಕರೆದುಕೊಂಡು ಹೋಗಲು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರು. ನಂತರ ಹೆಗಲ ಮೇಲೆ ಹೊತ್ತು ಆ್ಯಂಬುಲೆನ್ಸ್ ಗೆ ಸಾಗಿಸಿ ಆಸ್ಪತ್ರೆಗೂ ದಾಖಲಿಸಿದರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ ಈ ಸೇವೆಯನ್ನು ಮರೆಯದ ಆ ದಂಪತಿಯ ಮಕ್ಕಳು ತಮ್ಮ ಹೆತ್ತವರ ಪ್ರಾಣ ಉಳಿಸಿದವರ ಕುಟುಂಬವನ್ನು 25 ವರ್ಷಗಳ ಕಾಲ ನೆನಪಿನಲ್ಲಿಟ್ಟು ಇತ್ತೀಚೆಗೆ ನಡೆದ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿದ್ದಾರೆ. ಮಾನವೀಯತೆ, ಸೌಹಾರ್ದಕ್ಕೆ ಸಾಕ್ಷಿಯಾದ ಕಿನ್ನಿಗೋಳಿಯಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 25 ವರ್ಷಗಳ ಕಾಲ ಯಾರಾದರೂ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವೇ?: ಶರೀಫ್ 

25 ವರ್ಷಗಳ ಹಿಂದೆ ಸೀತಾರಾಮ ಶೆಟ್ಟಿ ದಂಪತಿಯ ಕಾರು ಅಪಘಾತಕ್ಕೀಡಾದ ಘಟನೆ ಮತ್ತು ನಂತರ ನಡೆದ ಘಟನೆಗಳ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ ಉದ್ಯಮಿ ಶರೀಫ್ ಸೂರಿಂಜೆ, “ನನ್ನ ಕಾರಿನ ಮುಂಭಾಗದಲ್ಲಿ ಸೀತಾರಾಮ್ ಶೆಟ್ಟರ ಪಿಯೆಟ್ ಕಾರು ಹೋಗುತ್ತಿತ್ತು. ಪಣಂಬೂರು ಬಂದರು ಬಳಿ ಸಾಗುತ್ತಿದ್ದಾಗ ಮಧ್ಯಾಹ್ನದ ವೇಳೆ ಯಾವ ವಾಹನವೂ ಇರಲಿಲ್ಲ. ನನಗೆ ಅವರನ್ನು ನೋಡಿದ ಪರಿಚಯವಿತ್ತು ಹೊರತು, ಅವರ ಜೊತೆ ಮಾತನಾಡಿರಲಿಲ್ಲ. ಪಣಂಬೂರು ಹತ್ತಿರ ಒಂದು ಲಾರಿ ಕಾರಿಗೆ ಢಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ದಂಪತಿ ಕಾರಿನಿಂದ ಹೊರಗೆಸೆಯಲ್ಪಟ್ಟಿದ್ದರು. ಲಾರಿ ಚಾಲಕ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದ. ನಾನು ಕೂಡಲೇ ಕಾರು ನಿಲ್ಲಿಸಿ ಅಪಘಾತ ನಡೆದ ಸ್ಥಳಕ್ಕೆ ಓಡಿದೆ. ಆ ಪ್ರದೇಶದಲ್ಲಿ ಊರವರು ಯಾರೂ ಇರಲಿಲ್ಲ. ಕೆಲವು ವಲಸೆ ಕಾರ್ಮಿಕರು ಮಾತ್ರ ಸ್ಥಳಕ್ಕೆ ಬಂದಿದ್ದರು. ನಾನು ಆ್ಯಂಬುಲೆನ್ಸ್ ಗೆ ಕರೆ ಮಾಡಿ, ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದೆ. ಆ ಮೇಲೆ 1 ಗಂಟೆಯ ನಂತರ ಅವರಿಗೆ ಎಚ್ಚರ ಬಂದಿತ್ತು. ಹೆದರಬೇಡಿ. ನಾನು ಊರಿನವನೇ. ನನ್ನ ಸ್ವಂತ ಊರು ಸೂರಿಂಜೆ ಎಂದೆ. ನಿಮ್ಮ ಸಂಬಂಧಿಕರು ಯಾರಿದ್ದಾರೆ ಎಂದು ಕೇಳಿದೆ. ಶಾಂತಾರಾಮ ಶೆಟ್ಟರಿಗೆ ಕರೆ ಮಾಡಿ ತಿಳಿಸಿ ಎಂದು ಅವರು ಹೇಳಿದರು. ಆದರೆ ನಂಬರ್ ನೀಡುವಷ್ಟು ಶಕ್ತಿ ಅವರಲ್ಲಿರಲಿಲ್ಲ. ನಾನು ಬೇರೆ ಯಾರಲ್ಲೋ ಕೇಳಿ, ಹುಡುಕಾಡಿ ಶಾಂತಾರಾಮ ಶೆಟ್ಟರಿಗೆ ವಿಷಯ ತಿಳಿಸಿದ್ದೆ. ನನಗೆ ಈ ಘಟನೆ ಮರೆತು ಹೋಗಿತ್ತು. 2 ವರ್ಷಗಳ ಮೊದಲು ಸೀತಾರಾಮ್ ಶೆಟ್ಟರ ಮಗ ಡಾ. ಕಿಶೋರ್ ಶೆಟ್ಟಿ ನನಗೆ ಪರಿಚಯವಾದರು. ಅದಕ್ಕೂ ಮೊದಲು ಅವರನ್ನು ಭೇಟಿಯಾಗುವಂತೆ ಸೀತಾರಾಮ ಶೆಟ್ಟರು ಬೇರೆಯವರಲ್ಲಿ ಹೇಳಿ ಕಳುಹಿಸುತ್ತಿದ್ದರು. ಆದರೆ ನಾನು ಹೋಗಿರಲಿಲ್ಲ. 2 ವರ್ಷಗಳ ಹಿಂದೆ ಮದುವೆ ಕಾರ್ಯಕ್ರಮವೊಂದಕ್ಕೆ ಅವರ ಪುತ್ರ ಡಾ. ಕಿಶೋರ್ ಶೆಟ್ಟಿ ಮತ್ತವರ ಪತ್ನಿ ಬಂದಿದ್ದರು. ಆಗ 25 ವರ್ಷಗಳ ಹಿಂದಿನ ಘಟನೆಯ ಬಗ್ಗೆ ಮತ್ತೆ ನೆನಪಾಯಿತು. ಸೀತಾರಾಮ ಶೆಟ್ಟಿಯವರ ಬಗ್ಗೆ ವಿಚಾರಿಸಿದ ನಂತರ ನಾನು ಮತ್ತು ನನ್ನ ಪುತ್ರ ಊಟಕ್ಕೆ ಹೋಗಿದ್ದೆವು. ನಾವು ಊಟ ಮಾಡಿ ಬರುವಾಗ ಕಿಶೋರ್ ಶೆಟ್ಟಿ ಮತ್ತವರ ಪತ್ನಿ ನನ್ನ ಬಳಿ ಬಂದು ಫೋಟೊ ತೆಗಿಯಬೇಕು ಎಂದರು. ನಂತರ ನನ್ನ ಕಾಲಿಗೆ ಬಿದ್ದರು. ನನಗೆ ಆಶ್ಚರ್ಯವಾಗಿತ್ತು”.  

“25 ವರ್ಷಗಳ ನಂತರವೂ ಅವರು ನಾನು ಮಾಡಿದ ಕೆಲಸವನ್ನು ನೆನಪಿಟ್ಟುಕೊಂಡಿರುವುದರಿಂದ ನನಗೆ ಸಂತೋಷವಾಗಿದೆ. 25 ವರ್ಷಗಳ ಕಾಲ ಯಾರಾದರೂ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವೇ?, ಧರ್ಮ ಬೇರೆಯಾದರೂ ಅವರು ನಮ್ಮ ಮೇಲಿಟ್ಟ ಪ್ರೀತಿಯಿಂದ ನಾನು ಮತ್ತು ನನ್ನ ಕುಟುಂಬಕ್ಕೆ ಅತೀವ ಸಂತೋಷವಾಗಿದೆ. ನಮ್ಮ ಸಮುದಾಯದವರೂ ಸಂತೋಷಗೊಂಡಿದ್ದಾರೆ. ಈದುಲ್ ಫಿತ್ರ್ ಗೆ ಶುಭಾಶಯ ಕೋರಿದ್ದ ನಂತರ ಅವರು ಕರೆ ಮಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಅವರ ಕುಟುಂಬದವರು ನಮ್ಮ ಕಾಲಿಗೆ ಬಿದ್ದರು. ಆ ಸಮಯದಲ್ಲಿ ನಾನು ತುಂಬಾ ಭಾವುಕನಾದೆ” ಎಂದು ಶರೀಫ್ ಹೇಳುತ್ತಾರೆ.

ಸೌದಿಯಲ್ಲಿದ್ದಾಗ ನನಗೆ ಯಾರೋ ಸಹಾಯ ಮಾಡಿದ್ದರು

“ನಾನು 18 ವರ್ಷದವನಾಗಿದ್ದಾಗ ಸೌದಿಯಲ್ಲಿರುವಾಗ ನನಗೆ ರೂಮ್ ಮತ್ತು ಊಟಕ್ಕೆ ಹಣದ ಸಮಸ್ಯೆ ಇತ್ತು. ಆಗ ನನ್ನ ಪರಿಚಯವೇ ಇಲ್ಲದ ಮೊಗವೀರ ಮತ್ತು ಶೆಟ್ಟರೊಬ್ಬರು ನನಗೆ 6 ತಿಂಗಳು ಊಟ ಹಾಕಿದ್ದರು. ಇಂತಹ ಸಂದರ್ಭಗಳಲ್ಲಿ ಮಾನವೀಯತೆ ಮೆರೆಯುವುದೇ ನಿಜವಾದ ಧರ್ಮ” ಎಂದು ಶರೀಫ್ ವಿವರಿಸುತ್ತಾರೆ.

ಅವರು ಮಾಡಿರುವ ಸಹಾಯದ ಮಹತ್ವ ನನಗೆ ತಿಳಿದಿದೆ: ಡಾ.ಕಿಶೋರ್ ಶೆಟ್ಟಿ

ಘಟನೆಯ ಬಗ್ಗೆ ಸೀತಾರಾಮ ಶೆಟ್ಟಿಯವರ ಪುತ್ರ ಡಾ.ಕಿಶೋರ್ ಶೆಟ್ಟಿ ಮಾತನಾಡುತ್ತಾ, “ನಾನು ಆಗ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದೆ. ಆಗ ನನ್ನ ತಂದೆ ತಾಯಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಆಗ ಶರೀಫ್ ಅವರು ಸ್ಥಳಕ್ಕೆ ಧಾವಿಸಿ, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ನನ್ನ ತಂದೆ, ತಾಯಿಯನ್ನು ಕಾಪಾಡಿದ್ದರು. ಇದನ್ನು ನನ್ನ ತಂದೆಯೇ ನನಗೆ ಹೇಳಿದ್ದರು. ನಾವು ಆ ಸಂದರ್ಭದಲ್ಲೇ ಅವರನ್ನು ಸಂಪರ್ಕಿಸಿದ್ದೆವು. ಆದರೆ ಅವರು ಅದು ನನ್ನ ಕರ್ತವ್ಯ ಎಂದಿದ್ದರು. ಕೆಲ ವರ್ಷಗಳ ಹಿಂದೆ ನಾನು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಮತ್ತೆ ಅವರ ಪರಿಚಯವಾಗಿತ್ತು. ಅಪಘಾತ ನಡೆದ ಸಂದರ್ಭದಲ್ಲಿ ತಾಯಿ ‘ಶರೀಫ್’ ಎಂದು ಹೇಳಿದ್ದು ನೆನಪಿತ್ತು. ಜೂನ್ 18ರಂದು ನನ್ನ ತಂದೆ-ತಾಯಿಯ 50ನೆ ವಿವಾಹ ವಾರ್ಷಿಕೋತ್ಸವಕ್ಕೆ ಶರೀಫ್ ರನ್ನು ಕರೆಸಿ ಸರ್ ಪ್ರೈಸ್ ನೀಡಲು ನಿರ್ಧರಿಸಿದೆವು. ಸಣ್ಣ ಪೂಜೆ ಇದೆ, ನೀವು ನಿಮ್ಮ ಪತ್ನಿ, ಮಕ್ಕಳು ಬರುತ್ತೀರಾ ಎಂದು ಕೇಳಿದ್ದೆ. ನನ್ನ ತಂದೆಗೂ ಅವರು ಬರುವುದು ಗೊತ್ತಿರಲಿಲ್ಲ. ವೇದಿಕೆಯಲ್ಲೇ ನನ್ನ ತಂದೆಗೆ ಇದು ಶರೀಫ್ ಎಂದು ತಿಳಿಸಿದ್ದೆ. ನನ್ನ ತಂದೆ-ತಾಯಿಯ ಜೀವವನ್ನು ಉಳಿಸಿದವರು ಅವರು. ಅವರು ಆಗ ಕರೆದುಕೊಂಡು ಹೋಗದಿದ್ದರೆ ನಮಗೆ ತಂದೆ-ತಾಯಿ ಇರುತ್ತಿರಲಿಲ್ಲ. ನಮ್ಮ ಕುಟುಂಬದವರೆಲ್ಲರೂ ಶರೀಫ್ ದಂಪತಿಯ ಕಾಲು ಹಿಡಿದು ನಮಸ್ಕರಿಸಿದೆವು. ಅವರು ಯಾವುದೇ ಪ್ರತಿಫಲ ಬಯಸಿ ಅಂದು ನನ್ನ ತಂದೆ-ತಾಯಿಯ ಪ್ರಾಣ ಉಳಿಸಿರಲಿಲ್ಲ. ಶರೀಫ್ ರನ್ನು ಕರೆಸಿ ಸನ್ಮಾನ ಮಾಡಿದ್ದಕ್ಕೆ ತಂದೆ ಸಂತೋಷ ವ್ಯಕ್ತಪಡಿಸಿದರು. ಅಂದು ಅವರು ಮಾಡಿರುವ ಸಹಾಯದ ಮಹತ್ವ ನನಗೆ ತಿಳಿದಿದೆ. ಹಿಂದೂ-ಮುಸ್ಲಿಮರ ನಡುವೆ ವೈಮನಸ್ಸು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖವಾಗುತ್ತದೆ. 25 ವರ್ಷಗಳ ನಂತರ ಈಗ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ತಂದೆ ತಾಯಿ ಇರುವುದು ನಮ್ಮ ಭಾಗ್ಯ. ಶರೀಫ್ ಮತ್ತವರ ಕುಟುಂಬ ಎಲ್ಲಿದ್ದರೂ ಒಳ್ಳೆಯದಾಗಲಿ” ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News