×
Ad

ಉಡುಪಿ ರೆಡ್‌ಕ್ರಾಸ್‌ನಿಂದ ವಿಶ್ವ ಯೋಗ ದಿನಾಚರಣೆ

Update: 2020-06-21 22:01 IST

ಉಡುಪಿ, ಜೂ.21: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ವಿಶ್ವ ಯೋಗ ದಿನಾಚರಣೆಯು ರವಿವಾರ ಅಜ್ಜರಕಾಡು ರೆಡ್ ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಶಾಖೆಯ ಉಪ ಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ಮಾತನಾಡಿ, ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ. ಅದು ಸಂಪೂರ್ಣ ಸ್ವ- ಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ ಎಂದರು.

ದೇಹವನ್ನು ಆರೋಗ್ಯವಾಗಿಡುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸ್ಸು ಸುದೃಢಗೊಳಿಸ ಬಲ್ಲ ಶಕ್ತಿ ಯೋಗಕ್ಕಿದೆ. ಯೋಗವು ದೇಹದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗಭ್ಯಾಸವನ್ನು ನಿತ್ಯ ಜೀವನದ ಒಂದು ಭಾಗವಾಗಿ ಅನುಷ್ಠಾನ ಮಾಡಿದಾಗ ಆರೋಗ್ಯ ಪೂರ್ಣ ಜೀವನ ನಮ್ಮದಾಗುತ್ತದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕೆ.ರಾಮಚಂದ್ರ ದೇವಾಡಿಗ ಮಾತನಾಡಿ, ಒತ್ತಡ ರಹಿತ ಜೀವನಕ್ಕೆ ಯೋಗ ಅತೀ ಅಗತ್ಯ. ಯೋಗ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುತ್ತದೆ. ಆಧ್ಯಾತ್ಮಿಕತೆಯ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಮೂಲಕ ಹೊಸ ಚೈತನ್ಯ ತುಂಬಿ ಆರೋಗ್ಯ ವೃದ್ಧಿಯಾಗಲು ಸಹಕಾರಿಯಾಗು ತ್ತದೆ ಎಂದು ಹೇಳಿದರು.

ಯೋಗ ಗುರುಗಳಾದ ಅಮಿತ್ ಕುಮಾರ್ ಶೆಟ್ಟಿ ಯೋಗದಿಂದ ಆಗುವ ಉಪಯೋಗಗಳ ಬಗ್ಗೆ ಸವಿವರವಾಗಿ ಮಾತನಾಡಿದರು. ಅಖಿಲಾ ಅಮಿತ್ ಕುಮಾರ್ ಶೆಟ್ಟಿ ಯೋಗ ತರಬೇತಿಯನ್ನು ನೀಡಿದರು. ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಂದಿಸಿದರು. ಜಯರಾಮ್ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News