ಟ್ರಂಪ್ ಬೆಂಬಲಿಗರ ವಿರುದ್ಧ ತನಿಖೆ ನಡೆಸಿದ್ದ ಪ್ರಾಸಿಕ್ಯೂಟರ್ ವಜಾ
ನ್ಯೂಯಾರ್ಕ್, ಜೂ. 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಬೆಂಬಲಿಗರನ್ನು ವಿಚಾರಣೆಗೆ ಗುರಿಪಡಿಸಿರುವ ಹೆಗ್ಗಳಿಕೆಯುಳ್ಳ ಫೆಡರಲ್ ಪ್ರಾಸಿಕ್ಯೂಟರ್ ಜಾಫ್ರಿ ಬರ್ಮನ್‌ರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಅಮೆರಿಕದ ಅಟಾರ್ನಿ ಜನರಲ್ ಬಿಲ್ ಬರ್ ಶನಿವಾರ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಬರ್ಮನ್ ತನ್ನ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಶುಕ್ರವಾರ ತಡರಾತ್ರಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯೊಂದರಲ್ಲಿ ಬರ್ ತಿಳಿಸಿದ್ದರು.
ಆದರೆ, ಇದಕ್ಕೆ ಪ್ರತಿಕ್ರಿಯಿದ ನ್ಯೂಯಾರ್ಕ್ ದಕ್ಷಿಣ ಜಿಲ್ಲೆಯ ಅಟಾರ್ನಿ ಕಚೇರಿಯ ಮುಖ್ಯಸ್ಥ ಜಾಫ್ರಿ ಬರ್ಮನ್, ನನಗೆ ರಾಜೀನಾಮೆ ನೀಡುವ ಉದ್ದೇಶವಿಲ್ಲ ಎಂದಿದ್ದರು ಹಾಗೂ ತನ್ನ ಕಚೇರಿಯ ತನಿಖೆಗಳು ಯಾವುದೇ ತಡೆಯಿಲ್ಲದೆ ಮುಂದುವರಿಯಲಿವೆ ಎಂದು ಹೇಳಿದ್ದರು.
ಆದರೆ, ಇಂದಿನಿಂದಲೇ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲು ಟ್ರಂಪ್ ಒಪ್ಪಿದ್ದಾರೆ ಎಂಬುದಾಗಿ ಶನಿವಾರ ಬರ್ಮನ್‌ಗೆ ಕಳುಹಿಸಿದ ಪತ್ರದಲ್ಲಿ ಬರ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ನಾನು ತಕ್ಷಣದಿಂದ ಅಧಿಕಾರದಿಂದ ಕೆಳಗಿಳಿಯುತ್ತಿದ್ದೇನೆ ಎಂದು ಬಳಿಕ ನೀಡಿದ ಹೇಳಿಕೆಯೊಂದರಲ್ಲಿ ಬರ್ಮನ್ ಹೇಳಿದರು.
ಅದೇ ವೇಳೆ, ಈ ಹಠಾತ್ ಬೆಳವಣಿಗೆಯಿಂದ ಹತಾಶಗೊಂಡಿರುವ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಸಂಸದರು, ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಬರ್ ಉಸ್ತುವಾರಿಯಲ್ಲಿ ನ್ಯಾಯಾಂಗ ಇಲಾಖೆಯು ರಾಜಕೀಕರಣಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.