×
Ad

ಉಚ್ಚಿಲ ಸೋಮೇಶ್ವರ: ಕಡಲ್ಕೊರೆತ ಪ್ರದೇಶಗಳಿಗೆ ಸಚಿವ ಕೋಟ ಭೇಟಿ

Update: 2020-06-21 23:55 IST

ಉಳ್ಳಾಲ, ಜೂ.21: ಉಚ್ಚಿಲ ಸೋಮೇಶ್ವರದಲ್ಲಿ ಕಡಲ್ಕೊರೆತ ತೀವ್ರಗೊಂಡಿರುವ ಪ್ರದೇಶಗಳಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರವಿವಾರ ಭೇಟಿ ನೀಡಿ ಪರಿಶೀಲಿಸಿದರು.

ಕಡಲ್ಕೊರೆತ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ತಡೆಗೋಡೆಗೆ ಕಲ್ಲುಗಳನ್ನು ಹಾಕಬೇಕು ಎಂಬ ತೀರವಾಸಿಗಳ ಒತ್ತಾಯದ ಹಿನ್ನೆಲೆಯಲ್ಲಿ ಆಗಮಿಸಿದ ಸಚಿವರು, ಕಡಲ್ಕೊರೆತ ಸಮಸ್ಯೆಯ ಬಗ್ಗೆ ಮುಖ್ಯ ಮಂತ್ರಿ ಜೊತೆ ಮಾತನಾಡಿದ್ದೇನೆ. ಕೊರೆತ ತೀವ್ರವಾಗಿರುವಲ್ಲಿ ತುರ್ತಾಗಿ ಕಲ್ಲುಗಳನ್ನು ಜೋಡಿಸಲು ಅವರು ಅನುಮತಿ ನೀಡಿದ್ದಾರೆ. ಯಾವುದೇ ಮೀನುಗಾರರಿಗೆ ತೊಂದರೆಯಾಗದಂತೆ ಕಲ್ಲನ್ನು ಜೋಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಉಳ್ಳಾಲದಿಂದ ಕಾರವಾರದವರೆಗಿನ 320 ಕಿ.ಮೀ. ಕಡಲ ತಡಿಯಲ್ಲಿ ಅಲೆಗಳ ಅಬ್ಬರ ತೀವ್ರವಾಗಿರುವುದರಿಂದ ಅತ್ಯಂತ ಹಾನಿಗೀಡಾದ ಪ್ರದೇಶಗಳಿಗೆ ಲ್ಲು ತರಿಸಿ ತಡೆಗೋಡೆ ನಿರ್ಮಿಸಲು ನಿರ್ಧರಿಸಲಾಗಿದೆ. ತುರ್ತಾಗಿ ಕಲ್ಲು ಜೋಡಿಸುವ ಕೆಲಸ ಇಂದಿನಿಂದಲೇ ಪ್ರಾರಂಭವಾಗಲಿದೆ ಎಂದು ಸಚಿವರು ಹೇಳಿದರು.

ತಾಪಂ ಸದಸ್ಯರಾದ ರವಿಶಂಕರ್ ಸೋಮೇಶ್ವರ, ನವೀನ್ ಪಾದಲ್ಪಾಡಿ, ಸೋಮೇಶ್ವರ ಪುರಸಭಾಧ್ಯಕ್ಷ ರಾಜೇಶ್ ಉಚ್ಚಿಲ್, ಸದಸ್ಯ ಸಚಿನ್, ಆಯುಕ್ತ ವಾಣಿ ಆಳ್ವ, ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್‌ಹೌಸ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ರೈಲ್ವೆ ಸಲಹಾ ಸಮಿತಿಯ ಮಾಜಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್, ಯಶವಂತ್ ಅಮೀನ್, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಮೋರೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News