ಉತ್ತರ ಪ್ರದೇಶ: ಸರಕಾರಿ ಆಶ್ರಯಧಾಮದಲ್ಲಿ 57 ಬಾಲಕಿಯರಿಗೆ ಕೊರೋನ, ಐವರು ಗರ್ಭಿಣಿಯರು

Update: 2020-06-21 18:32 GMT

ಲಕ್ನೋ: ಸರಕಾರ ನಡೆಸುವ ಮಕ್ಕಳ ಆಶ್ರಯಧಾಮವೊಂದರ 57 ಅಪ್ರಾಪ್ತ ಬಾಲಕಿಯರು ಕೊರೋನ ಸೋಂಕಿಗೊಳಗಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ. ಇದರಲ್ಲಿ ಐವರು ಬಾಲಕಿಯರು ಗರ್ಭಿಣಿಯರಾಗಿದ್ದು, ಒಬ್ಬಾಕೆ ಎಚ್ ಐವಿ ಸೋಂಕಿತೆ ಎಂದು ವರದಿಯಾಗಿದೆ.

ಘಟನೆ ಬೆಳಕಿಗೆ ಬರುತ್ತಲೇ ಉತ್ತರ ಪ್ರದೇಶ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಆಡಳಿತ ಆಶ್ರಯ ತಾಣಕ್ಕೆ ಬೀಗ ಜಡಿದಿದ್ದು, ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿರಿಸಿದೆ.

ಆಶ್ರಯ ತಾಣದಲ್ಲಿ 7 ಬಾಲಕಿಯರು ಗರ್ಭಿಣಿಯರಾಗಿದ್ದು, ಅವರಲ್ಲಿ 5 ಮಂದಿಗೆ ಕೊರೋನ ಸೋಂಕು ತಗಲಿದೆ. ಈ 7 ಮಂದಿ ಮೊದಲೇ ಗರ್ಭಿಣಿಯರಾಗಿದ್ದು, ಬೇರೆ ಬೇರೆ ಕಡೆಗಳಲ್ಲಿರುವ ಅವರ ಮನೆಗಳಿಗೆ ಕಳುಹಿಸಲಾಗಿದೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಬ್ರಹ್ಮ ದಿಯೋ ರಾಮ್ ತಿವಾರಿ ಮಾಹಿತಿ ನೀಡಿದ್ದಾರೆ.

“ಬೇರೆ ಬೇರೆ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಯು ಐವರು ಬಾಲಕಿಯರನ್ನು ಕಳುಹಿಸಿದೆ. ಅವರು ಇಲ್ಲಿಗೆ ಆಗಮಿಸುವಾಗಲೇ ಗರ್ಭಿಣಿಯರಾಗಿದ್ದರು. ಇವೆಲ್ಲವೂ ಪೋಕ್ಸೋ ಪ್ರಕರಣಗಳು. ಆಶ್ರಯ ತಾಣಕ್ಕೆ ಅವರನ್ನು ದಾಖಲಿಸುವಾಗಲೇ ಅವರೆಲ್ಲರೂ ಗರ್ಭಿಣಿಯರಾಗಿದ್ದರು” ಎಂದವರು ಹೇಳಿದ್ದಾರೆ.

“ಬಾಲಕಿಯರು ಆಶ್ರಯ ತಾಣದಲ್ಲಿದ್ದಾಗ ಗರ್ಭಿಣಿಯರಾಗಿದ್ದಾರೆ ಎಂದು ಹಲವರು ಸುಳ್ಳು ಹಬ್ಬಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News