×
Ad

ತುಳುಹಾಡಿನ ಮೂಲಕ ವಿಶ್ವದಾಖಲೆ ಸೃಷ್ಟಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ

Update: 2020-06-22 14:58 IST

ಮಂಗಳೂರು, ಜೂ.22: ನಗರದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಾಣೇಶ್ ಎಂಬವರು ಯುನೈಟೆಡ್ ಕಿಂಗ್‌ಡಮ್‌ನ ವರ್ಲ್ಡ್‌ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. 21 ಅಡಿ ಉದ್ದದ ಕವನದ ಮೂಲಕ ವಿಶ್ವ ದಾಖಲೆ ಸೃಷ್ಟಿಸಿರುವ ಪ್ರಾಣೇಶ್ ಕುಲಶೇಖರದ ನಿವಾಸಿ.

ದ್ವಿತೀಯ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಅಧ್ಯಯನ ಮಾಡುತ್ತಿರುವ ಪ್ರಾಣೇಶ್ ‘ತುಳುನಾಡ ಐಸಿರಿ’ ಎಂಬ ಹೆಸರಿನಲ್ಲಿ ಕವನವನ್ನು ರಚಿಸಿದ್ದಾರೆ. ತುಳುಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ಈ ಕವನದಲ್ಲಿ 108 ಚರಣಗಳಿವೆ. 2241 ತುಳು ಶಬ್ದಗಳನ್ನು ಬಳಸಿ ಕವನ ರಚಿಸಿರುವ ಪ್ರಾಣೇಶ್, ಇದಕ್ಕಾಗಿ 30ಕ್ಕೂ ಅಧಿಕ ಎ4 ಹಾಳೆಯನ್ನು ಉಪಯೋಗಿಸಿದ್ದಾರೆ.

432 ಸಾಲುಗಳನ್ನು ಹೊಂದಿರುವ ಈ ಕವನದಲ್ಲಿ ತುಳನಾಆಡ ಹಬ್ಬಗಳ ಆಚರಣೆ, ದೈವಾರಾಧನೆ, ನಾಗಾರಾಧನೆ, ಪುಣ್ಯಕ್ಷೇತ್ರ, ಜನಪ್ರಿಯ ಕ್ರೀಡೆ ಜತೆಗೆ ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸುವ ಮನವಿಗೆ ಸಾಹಿತ್ಯ ರೂಪು ನೀಡಿದ್ದಾರೆ.

ಸಾಹಿತ್ಯದ ಬಗ್ಗೆ ಅಭಿರುಚಿ ಹಾಗೂ ಆಸಕ್ತಿ ಹೊಂದಿರುವ ಪ್ರಾಣೇಶ್, ಕವನ ರಚನೆಯ ಜತೆಯಲ್ಲೇ ನಾಟಕಗಳ ಸ್ಕ್ರಿಪ್ಟ್ ರಚನೆಯನ್ನೂ ಮಾಡುತ್ತಾರೆ. ತಂತ್ರಜ್ಞಾನ ಕ್ಷೇತ್ರದ ಅಧ್ಯಯನವಾದರೂ ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯದ ಕುರಿತಾದ ಆಸಕ್ತಿಯನ್ನು ಮುಂದುವರಿಸಿದ್ದಾರೆ.

‘‘2019ರ ಆಗಸ್ಟ್ ಹಾಗೂ ಜನವರಿಯಲ್ಲಿ ಬರೆದ ದೀರ್ಘವಾದ ತುಳು ಕವನವನ್ನು ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ಗೆ ಕಳುಹಿಸಿದ್ದೆ. ಆದರೆ ಅದು ಅಲ್ಲಿಗೆ ತಲುಪಿರಲಿಲ್ಲ. ಹಾಗಾಗಿ ಮತ್ತೆ ಅದನ್ನು ಬರೆದು ಕಳೆದ ಫೆಬ್ರವರಿಯಲ್ಲಿ ಕಳುಹಿಸಿದ್ದೆ. ಅದೀಗ ಆಯ್ಕೆಗೊಂಡು ಸರ್ಟಿಫಿಕೆಟ್ ಬಂದಿದೆ. ತುಳುನಾಡಿನ ಪುಣ್ಯಕ್ಷೇತ್ರಗಳ ನಾಡು. ಇಲ್ಲಿನ ದೈವಾರಾಧನೆ ಕುತೂಹಲಕಾರಿ. ಇವುಗಳ ಬಗ್ಗೆ ಅಪಾರವಾದ ಜ್ಞಾನ ನನಗಿಲ್ಲ. ಆದರೆ ನಾನು ಕಂಡಿದ್ದು, ನಾನು ಕೇಳಿದ್ದು ಹಾಗೂ ನನಗೆ ಅರಿವಾಗಿರುವುದನ್ನು ಕವನ ರೂಪದಲ್ಲಿ ಪ್ರಸ್ತುತಪಡಿಸಿದ್ದೇನೆ’’ ಎಂದು ವಿಶ್ವದಾಖಲೆಯ ಖುಷಿಯನ್ನು ‘ವಾರ್ತಾಭಾರತಿ’ ಜತೆ ಹಂಚಿಕೊಂಡಿದ್ದಾರೆ ಪ್ರಾಣೇಶ್.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News