ಗೋಹತ್ಯೆ ನಿಷೇಧಕ್ಕೆ ರಾಮಸೇನೆ ಆಗ್ರಹ
ಮಂಗಳೂರು, ಜೂ.22: ಜಿಲ್ಲೆಯಲ್ಲಿ ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿ ಸಂಘರ್ಷಕ್ಕೆ ಕಾರಣವಾಗುವುದನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಸರಕಾರ ಗೋಹತ್ಯೆ ನಿಷೇಧಿಸಬೇಕು ಎಂದು ರಾಮಸೇನೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ರಾಮಸೇನೆ ಜಿಲ್ಲಾಧ್ಯಕ್ಷ ಕಿರಣ್ ವಿ. ಅಮೀನ್, ಜಿಲ್ಲೆಯಲ್ಲಿ ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿ ಪೊಲೀಸರೇ ತಡೆದು ಕ್ರಮ ಕೈಗೊಂಡರೆ ಸಂಘ ಪರಿವಾರದ ಕಾರ್ಯಕರ್ತರು ಬೀದಿಗೆ ಬರಬೇಕಾಗಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಅಕ್ರಮವಾಗಿ ಎಮ್ಮೆಗಳನ್ನು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಹಮ್ಮದ್ ಹನೀಫ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಆತ ತಾನು ಅಧಿಕೃತ ದಾಖಲೆಗಳೊಂದಿಗೆ ಜಾನುವಾರು ಸಾಗಾಟ ಮಾಡಿದ್ದಾಗಿ, ನಿರ್ದೋಷಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು ಸಂಘ ಪರಿವಾರದ ಕುಮ್ಮಕ್ಕಿನಿಂದ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಕೂಡಾ ಆರೋಪಿಸಲಾಗಿದೆ. ಆದರೆ ಮುಹಮ್ಮದ್ ಹನೀಫ್ ಪಣಂಬೂರು ಠಾಣೆಯಲ್ಲಿ ರೌಡಿಶೀಟರ್ ಎಂದು ಪರಿಗಣಿಸಲಾಗಿದೆ. ಇದಲ್ಲದೆ ಬ್ರಹ್ಮಾವರ, ಸಕಲೇಶಪುರ, ಉಪ್ಪಿಂಗಡಿ ಠಾಣೆಗಳಲ್ಲಿ ಪ್ರಕರಣಗಳಿರುವಾಗ ನಿರ್ದೋಷಿ ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಕಿರಣ್ ಆಪಾದಿಸಿದ್ದಾರೆ.
ಪೊಲೀಸರ ಕ್ರಮವನ್ನು ತಾವು ಬೆಂಬಲಿಸುವುದಾಗಿ ಹೇಳಿದ ಅವರು, ಕ್ಷುಲ್ಲಕ ಕಾರಣಕ್ಕೆ ಜಿಲ್ಲೆಯಲ್ಲಿ ಆಗಾಗ್ಗೆ ಕೋಮು ಸಂಘರ್ಷ ನಡೆಯುವುದು ನಮಗೆ ಇಷ್ಟವಿಲ್ಲ. ಗೋಹತ್ಯೆಯನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶ ಎಂದರು.
ಮುಹಮ್ಮದ್ ಹನೀಫ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿರಣ್, ಉರ್ವಾಸ್ಟೋರ್ ಬಳಿ ಜಾನುವಾರು ಸಾಗಾಟದ ವಾಹನವನ್ನು ತಡೆದಿದ್ದು ನಮ್ಮ ಕಾರ್ಯಕರ್ತರೇ ಆದರೆ, ಹಲ್ಲೆ ಮಾಡಿರುವ ಬಗ್ಗೆ ನಮಗೆ ಗೊತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ್, ವಚನ್ ಕುಮಾರ್, ಹರ್ಷಿತ್ ಅಡ್ಯಾರ್‌ಪದವು ಉಪಸ್ಥಿತರಿದ್ದರು.