ಇಬ್ಬರು ಪೊಲೀಸ್ ಸಿಬ್ಬಂದಿಗೆ ಕೊರೋನ ವೈರಸ್ : ಬೈಂದೂರು ಠಾಣೆ, ಸಿಪಿಐ ಕಚೇರಿ ಸೀಲ್‌ಡೌನ್
ಬೈಂದೂರು, ಜೂ. 22: ಬೈಂದೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಇಬ್ಬರು ಪೊಲೀಸ್ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಇಂದು ಬೈಂದೂರು ಠಾಣೆ ಮತ್ತು ಅದೇ ಆವರಣದಲ್ಲಿರುವ ಬೈಂದೂರು ವೃತ್ತ ನಿರೀಕ್ಷಕರ(ಸಿಪಿಐ) ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಜೂ.21ರಂದು ಠಾಣೆಯ ಮಹಿಳಾ ಸಿಬ್ಬಂದಿಗೆ ಮತ್ತು ಜೂ.22ರಂದು ಇನ್ನೊಬ್ಬ ಸಿಬ್ಬಂದಿಗೆ ಕೊರೋನ ಪಾಸಿಟಿವ್ ವರದಿ ಬಂದಿದೆ. ಇವರಿಬ್ಬರು ಕೂಡ ಠಾಣೆಯ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಗಳಾಗಿದ್ದು, ಒಟ್ಟಿಗೆ ಕೂತು ಕೆಲಸ ಮಾಡುವವರಾಗಿದ್ದಾರೆ. ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ, ಠಾಣೆಗೆ ಬಂದು ಸೋಂಕಿತರ ಸಂಪರ್ಕ ಮಾಡಿದ್ದರೆನ್ನಲಾಗಿದೆ. ಸದ್ಯ ಪೊಲೀಸ್ ಠಾಣೆ ಮತ್ತು ಸಿಪಿಐ ಕಚೇರಿಯನ್ನು ಹಳೆಯ ವೃತ್ತ ನಿರೀಕ್ಷಕರ ಕಚೇರಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ಬೈಂದೂರು ಠಾಣೆಯ ಎಸ್ಸೈ ಸೇರಿದಂತೆ 30 ಮಂದಿ ಸಿಬ್ಬಂದಿ ಹಾಗೂ ವೃತ್ತ ನಿರೀಕ್ಷಕರು ಮತ್ತು ಅಲ್ಲಿನ ಐವರು ಸಿಬ್ಬಂದಿಗಳಿಗೆ ಹೋಮ್ ಕ್ವಾರಂಟೇನ್ ವಿಧಿಸಲಾಗಿದೆ.
ಎಲ್ಲ ಠಾಣೆಗಳಲ್ಲಿ ಸಿಬ್ಬಂದಿಗಳು ಈಗ 10 ದಿನ ಹೊರಗಡೆ, 10 ದಿನ ಒಳಗಡೆ ಹಾಗೂ 10 ದಿನ ವಿಶ್ರಾಂತಿ ಹೀಗೆ ಒಟ್ಟು ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದುದರಿಂದ ಬೈಂದೂರು ಠಾಣೆಯಲ್ಲಿ ಕಳೆದ 18 ದಿನಗಳಿಂದ ಸೋಂಕಿತರ ಸಂಪರ್ಕಕ್ಕೆ ಬಾರದ ಒಂದು ಪಾಳಿಯ ಸುಮಾರು ಎಂಟು ಮಂದಿ ಸಿಬ್ಬಂದಿಗಳಿದ್ದಾರೆ. ಅದರಲ್ಲಿ ಇಬ್ಬರು 50 ವರ್ಷ ಮೇಲ್ಪಟ್ಟವರಿದ್ದಾರೆ. ಉಳಿದ ಆರು ಮಂದಿ ಸದ್ಯ ಈ ತಾತ್ಕಾಲಿಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಠಾಣೆಯನ್ನು ಇಂದು ಮತ್ತು ನಾಳೆ ಎರಡು ಅಥವಾ ಮೂರು ಬಾರಿ ಸ್ಯಾನಿಟೈಸ್ ಮಾಡ ಲಾಗುತ್ತದೆ. 48 ಗಂಟೆಗಳ ಬಳಿಕ ಈ ಕಚೇರಿಯನ್ನು ಪುನಾರಂಭಿಸಲಾಗು ವುದು. ಸೋಂಕಿತರನ್ನು ಸಂಪರ್ಕಿಸಿದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಾಗುವುದು ಎಂದು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.