×
Ad

ದ.ಕ.ದಲ್ಲಿ ಇಂದು 12 ಮಂದಿಗೆ ಕೊರೋನ ಪಾಸಿಟಿವ್

Update: 2020-06-22 20:21 IST

ಮಂಗಳೂರು, ಜೂ. 22: ದ.ಕ. ಜಿಲ್ಲೆಯಲ್ಲಿ ಸೋಮವಾರ 12 ಮಂದಿಯನ್ನು ಕೊರೋನ ಸೋಂಕು ಬಾಧಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 445ಕ್ಕೆ ಏರಿದೆ. ಈ ನಡುವೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಸೋಮವಾರ ಸ್ವೀಕೃತವಾದ ಒಟ್ಟು 269 ವರದಿಗಳ ಪೈಕಿ 12 ಪಾಸಿಟಿವ್ 257 ನೆಗೆಟಿವ್ ಆಗಿದೆ. ಹೊಸ ಸೋಂಕಿತರಲ್ಲಿ 11 ಮಂದಿ ಕತರ್, ಮಸ್ಕತ್, ಸೌದಿ ಅರೇಬಿಯಾ ದೇಶಗಳಿಂದ ಆಗಮಿಸಿದ್ದರೆ, ಒಬ್ಬರು ಮಂಗಳೂರಿನ ನಿವಾಸಿಗೆ ಸೋಂಕು ತಗುಲಿದ್ದು, ಮೂಲ ಖಚಿತಪಟ್ಟಿಲ್ಲ. ಇದು ಇನ್‌ಫ್ಲೂಯೆಂಝಾ ಲೈಕ್ ಇಲ್‌ನೆಸ್ (ಐಎಲ್‌ಐ) ಪ್ರಕರಣವಾಗಿದ್ದಾಗಿ ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ. ಇವರೆಲ್ಲರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕತರ್‌ನಿಂದ ಆಗಮಿಸಿದ 64 ವರ್ಷದ ಪುರುಷ, 65 ವರ್ಷದ ಮಹಿಳೆಗೆ ಸೋಂಕು ತಗುಲಿದ್ದರೆ, ಕುವೈತ್‌ನಿಂದ ಆಗಮಿಸಿದ 42, 25, 33, 41 ವರ್ಷದ ಪುರುಷರು ಹಾಗೂ 45 ವರ್ಷದ ಮಹಿಳೆ, ಮಸ್ಕತ್‌ನಿಂದ ಬಂದ 37 ವರ್ಷದ ಪುರುಷ, ಸೌದಿ ಅರೇಬಿಯಾದಿಂದ ಆಗಮಿಸಿದ 37 ವರ್ಷದ ಪುರುಷ, ಶಾರ್ಜಾದಿಂದ ಆಗಮಿಸಿದ 44 ವರ್ಷದ ಪುರುಷರಲ್ಲಿ ಸೋಂಕು ದೃಢಪಟ್ಟಿದೆ.

ಇನ್ನೊಂದು ಪ್ರಕರಣದಲ್ಲಿ ಜ್ವರ ಮತ್ತು ಶೀತದ ಕಾರಣದಿಂದ ಆಸ್ಪತ್ರೆ ಸೇರಿದ್ದ 27 ವರ್ಷದ ಯುವಕನಲ್ಲಿ ಕೊರೋನ ಸೋಂಕು ಇರುವುದು ದೃಢವಾಗಿದ್ದು, ಇದು ಹೊಸ ಪ್ರಕರಣವಾಗಿದೆ. ಮಂಗಳೂರಿನ ನಿವಾಸಿಯಾದ ಈತನಿಗೆ ಹೇಗೆ ಸೋಂಕು ತಗುಲಿತು ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ. ಉಳಿದವರೆಲ್ಲರೂ ಕ್ವಾರಂಟೈನ್‌ನಲ್ಲಿ ಇದ್ದವರೇ ಆಗಿದ್ದಾರೆ.

12 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಸೋಮವಾರ 12 ಪಾಸಿಟಿವ್ ಕಂಡುಬಂದರೆ, ಇದೇ ಅವಧಿಯಲ್ಲಿ 12 ಮಂದಿ ಕೊರೋನ ಸೋಂಕು ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಇದುವರೆಗೆ ಒಟ್ಟು 250 ಮಂದಿ ಕೋರೊನದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ. ಪ್ರಸ್ತುತ 187 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 70 ಹಾಗೂ 56 ವರ್ಷದ ಪುರುಷರಿಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, 70 ವರ್ಷದ ವ್ಯಕ್ತಿಗೆ ವೆಂಟಿಲೇಟರ್ ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News