×
Ad

ಗಲ್ವಾನ್ ಮಾತುಕತೆ: ತನ್ನ ಅಧಿಕಾರಿಯ ಸಾವನ್ನು ದೃಢಪಡಿಸಿದ ಚೀನಿ ಸೇನೆ

Update: 2020-06-22 20:21 IST

 ಹೊಸದಿಲ್ಲಿ,ಜೂ.22: ಪೂರ್ವ ಲಡಾಖ್‌ನಲ್ಲಿ ಜೂ.15ರಂದು ಸಂಭವಿಸಿದ್ದ ಹಿಂಸಾತ್ಮಕ ಘರ್ಷಣೆಯಲ್ಲಿ ತನ್ನ ಕಮಾಂಡಿಂಗ್ ಅಧಿಕಾರಿಯೋರ್ವ ಕೊಲ್ಲಲ್ಪಟ್ಟಿರುವುದನ್ನು ಸೋಮವಾರ ಭಾರತೀಯ ಸೇನೆಯೊಂದಿಗೆ ಮಾತುಕತೆಗಳ ಸಂದರ್ಭದಲ್ಲಿ ಚೀನಾದ ಸೇನೆಯು ದೃಢಪಡಿಸಿದೆ. ಇದೇ ವೇಳೆ ಚೈನೀಸ್ ಕಮ್ಯುನಿಸ್ಟ್ ಪಾರ್ಟಿ ಆಡಳಿತದ ಮುಖವಾಣಿ ಗ್ಲೋಬಲ್ ಟೈಮ್ಸ್ ಘರ್ಷಣೆಗಳಲ್ಲಿ ‘20ಕ್ಕೂ ಕಡಿಮೆ ’ಚೀನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ‘ಚೀನಿ ತಜ್ಞರನ್ನು ’ಉಲ್ಲೇಖಿಸಿ ವರದಿ ಮಾಡಿದೆ.

ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಚೀನಾ ಪಾರ್ಶ್ವದಲ್ಲಿರುವ ಮೊಲ್ಡೋದಲ್ಲಿ ಭಾರತ ಮತ್ತು ಚೀನಾ ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ ಮಾತುಕತೆಗಳನ್ನು ನಡೆಸಿದವು.

20 ಭಾರತೀಯ ಯೋಧರು ಹುತಾತ್ಮರಾದ ಒಂದು ವಾರದ ಬಳಿಕ ಚೀನಾ ತನ್ನ ಕಡೆಯಲ್ಲಿ ಸಾವು ಸಂಭವಿಸಿರುವುದನ್ನು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಘರ್ಷಣೆಗಳಲ್ಲಿ 45 ಚೀನಿ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದ್ದವು. ಆದರೆ ಚೀನಾ ಸರಕಾರವು ಈ ಬಗ್ಗೆ ಈವರೆಗೆ ಬಾಯಿ ಬಿಟ್ಟಿರಲಿಲ್ಲ.

ಘರ್ಷಣೆಗಳಲ್ಲಿ 76 ಭಾರತೀಯ ಯೋಧರು ಗಾಯಗೊಂಡಿದ್ದು,ಚೇತರಿಕೆಯ ಬಳಿಕ ಕರ್ತವ್ಯಕ್ಕೆ ಮರಳಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಜೂನ್ 6ರ ನಂತರ ಇದು ಉಭಯ ಕಾರ್ಪ್ಸ್ ಕಮಾಂಡರ್‌ಗಳ ನಡುವಿನ ಎರಡನೇ ಮಾತುಕತೆಯಾಗಿದೆ. ಹಲವಾರು ಸ್ಥಳಗಳಿಂದ ಸೈನಿಕರನ್ನು ಹಿಂದೆಗೆದುಕೊಳ್ಳಲು ಅಂದು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಎಲ್‌ಎಸಿಯಲ್ಲಿ ಮೇ 4ರ ಮೊದಲಿನ ಮಿಲಿಟರಿ ನೆಲೆಗಳಿಗೆ ಮರಳುವಂತೆ ಭಾರತ ಚೀನಾಕ್ಕೆ ಸೂಚಿಸಿತ್ತು. ಭಾರತದ ಪ್ರಸ್ತಾವಕ್ಕೆ ಚೀನಿಯರು ಉತ್ತರಿಸಿರಲಿಲ್ಲ ಮತ್ತು ಗಡಿಗೆ ಸಮೀಪ ತಾನು ಕಲೆಹಾಕಿದ್ದ 10,000ಕ್ಕೂ ಅಧಿಕ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಯಾವುದೇ ಸೂಚನೆಯನ್ನೂ ನೀಡಿರಲಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News