ಬಾರಕೂರು ಚೌಳಿಕೆರೆ ಕಾರು ಅಪಘಾತ ಪ್ರಕರಣ: ಸಾವಿನ ದವಡೆಯಿಂದ ಯುವತಿಯನ್ನು ಪಾರು ಮಾಡಿದ ವಿದ್ಯಾರ್ಥಿನಿ !

Update: 2020-06-22 14:59 GMT
ನಮನ

ಬ್ರಹ್ಮಾವರ, ಜೂ. 22: ಬಾರಕೂರು ಚೌಳಿಕೆರೆಗೆ ಜೂ.21ರಂದು ಉರುಳಿ ಬಿದ್ದ ಕಾರಿನೊಳಗೆ ಸಿಲುಕಿ ತೀವ್ರ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಶ್ವೇತಾ ಅವರ ಪ್ರಾಣ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಥಳೀಯ ನಿವಾಸಿ 10ನೆ ತರಗತಿಯ ವಿದ್ಯಾರ್ಥಿನಿ ನಮನ(15) ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ವೇತಾರಿಗೆ ನಮನ ಪ್ರಥಮ ಚಿಕಿತ್ಸೆ ನೀಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮನ ಅವರ ಸಮಯ ಪ್ರಜ್ಞೆಯಿಂದಾಗಿ ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಶ್ವೇತಾ, ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಸವಿತಾ ಎರ್ಮಾಳ್ ಹಾಗೂ ಕುಮಾರಸ್ವಾಮಿ ದಂಪತಿಯ ಪುತ್ರಿ ನಮನ, ಬ್ರಹ್ಮಾವರ ಲಿಟ್ಲ್‌ರಾಕ್ ಆಂಗ್ಲ ಮಾಧ್ಯಮ ಶಾಲೆಯ 10ನೆ ತರಗತಿಯ ವಿದ್ಯಾರ್ಥಿನಿ. ಬ್ರಹ್ಮಾವರ ಬೋರ್ಡ್ ಹೈಸ್ಕೂಲಿನ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿಯಾಗಿರುವ ಸವಿತಾ ಎರ್ಮಾಳ್, ಎನ್‌ಎಸ್‌ಎಸ್ ನೋಡೆಲ್ ಅಧಿಕಾರಿಯಾಗಿದ್ದಾರೆ.

‘ಅಪಘಾತ ನಡೆದಾಗ ಕೇಳಿಬಂದ ಶಬ್ಧದಿಂದ ನಾವೆಲ್ಲ ಹೊರಗಡೆ ಓಡಿ ಬಂದೆವು. ಆಗ ಸ್ಥಳೀಯರು ಯುವತಿಯೊಬ್ಬರನ್ನು ನೀರಿನಿಂದ ಎತ್ತಿಕೊಂಡು ಮೇಲಕ್ಕೆ ಹೊತ್ತುಕೊಂಡು ಬಂದರು. ಸಾಕಷ್ಟು ನೀರು ಕುಡಿದಿದ್ದ ಶ್ವೇತಾ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು. ಅವರ ಹೃದಯ ಬಡಿತ ನಿಂತಿದ್ದವು. ಕೂಡಲೇ ನಾನು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದೆ. ಸುಮಾರು 15 ನಿಮಿಷಗಳ ಕಾಲ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಅವರು ನೀರನ್ನು ಬಾಯಿ ಮೂಲಕ ಹೊರಗಡೆ ಹಾಕಿ ದರು’ ಎಂದು ನಮನ ತಿಳಿಸಿದ್ದಾರೆ.

‘ನನ್ನ ತಾಯಿ ಎನ್‌ಎಸ್‌ಎಸ್ ನೋಡೆಲ್ ಅಧಿಕಾರಿಯಾಗಿರುವುದರಿಂದ ಶಿಬಿರಕ್ಕೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಗಮನ ಇಟ್ಟು ಕೇಳಿ ತಿಳಿದ ಪ್ರಥಮ ಚಿಕಿತ್ಸೆ ಇಂದು ನೆರವಿಗೆ ಬಂದಿದೆ. ಅದೇ ರೀತಿ ನಾನು ಕೂಡ ಎನ್‌ಸಿಸಿ ವಿದ್ಯಾರ್ಥಿನಿ ಮತ್ತು ನನ್ನ ತಂದೆ ಕೂಡ ಎನ್‌ಸಿಸಿ ಯಲ್ಲಿದ್ದರು. ಹೀಗಾಗಿ ಶ್ವೇತಾ ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಸಾಧ್ಯ ವಾಯಿತು’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News