×
Ad

ಉಡುಪಿ: ನರ್ಸ್, ಪೊಲೀಸ್ ಸಿಬ್ಬಂದಿ ಸೇರಿ 14 ಮಂದಿಗೆ ಕೊರೋನ ಪಾಸಿಟಿವ್

Update: 2020-06-22 20:36 IST

ಉಡುಪಿ, ಜೂ.22: ಬೈಂದೂರು ಪೊಲೀಸ್ ಠಾಣೆಯ 39ರ ಹರೆಯದ ಕಾನ್‌ಸ್ಟೇಬಲ್ ಹಾಗೂ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ 26ರ ಹರೆಯ ನರ್ಸ್ ಸೇರಿದಂತೆ ಒಟ್ಟು 14 ಮಂದಿಯಲ್ಲಿ ಸೋಮವಾರ ಕೋವಿಡ್-19ರ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ನರ್ಸ್ ಅವರು ಈ ಮೊದಲು ಪಾಸಿಟಿವ್ ಬಂದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ವರ್ಗಾಯಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದು, ಅಲ್ಲಿ ಅವರಿಗೆ ಸೋಂಕು ತಗಲಿರಬೇಕು ಎಂದು ಶಂಕಿಸಲಾಗಿದೆ. ಇದೀಗ ಶಿರೂರು ಪಿಎಚ್‌ಸಿಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಅಲ್ಲಿನ ವೈದ್ಯಾಧಿಕಾರಿ ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಟೈಸ್ ಮಾಡಿದ ಬಳಿಕ ಎರಡು ದಿನದ ನಂತರ ಬದಲಿ ಸಿಬ್ಬಂದಿಗಳೊಂದಿಗೆ ಆಸ್ಪತ್ರೆಯನ್ನು ತೆರೆಯಲಾಗುವುದು ಎಂದು ಸೂಡ ತಿಳಿಸಿದರು.

ಮಹಿಳಾ ಪೊಲೀಸ್‌ಗೆ ಪಾಸಿಟಿವ್: ಇಂದು ಪಾಸಿಟಿವ್ ಬಂದಿರುವ 39ರ ಹರೆಯದ ಪೊಲೀಸ್ ಸಿಬ್ಬಂದಿ ಶಿರೂರು ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತಿದ್ದ ವೇಳೆ ಸೋಂಕು ತಗಲಿರಬೇಕು ಎಂದು ಶಂಕಿಸಲಾಗಿದೆ. ಇದೀಗ ಈ ಪೊಲೀಸ್ ಕಾನ್‌ಸ್ಟೇಬಲ್ ಜೊತೆಯಲ್ಲಿ ಕೆಲಸ ಮಾಡಿದ ಅದೇ ಠಾಣೆಯ ಮಹಿಳಾ ಸಿಬ್ಬಂದಿಗೂ ಇಂದು ಪಾಸಿಟಿವ್ ಬಂದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ವಿವರಗಳು ತಿಳಿದುಬಂದಿಲ್ಲ.

ಪೊಲೀಸ್ ಸಿಬ್ಬಂದಿಗಳನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ಸೇರಿಸಲಾ ಗಿದೆ. ಸದ್ಯ ಬೈಂದೂರು ಠಾಣೆ ಮತ್ತು ವೃತ್ತ ನಿರೀಕ್ಷಕರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಅಲ್ಲಿನ ಎಲ್ಲಾ ಸಿಬ್ಬಂದಿಗಳನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಮುಚ್ಚಿರುವ ಠಾಣೆಗಳನ್ನು ಸ್ಯಾನಟೈಸ್ ಮಾಡಿದ ಬಳಿಕ ಒಂದೆರಡು ದಿನಗಳ ತೆರೆಯಲಾಗುವುದು ಎಂದು ತಿಳಿದುಬಂದಿದೆ.

ಸೋಮವಾರ ಪಾಸಿಟಿವ್ ಬಂದಿರುವ ಉಳಿದ 12 ಮಂದಿಯಲ್ಲಿ ಎಂಟು ಮಂದಿ ಮಹಾರಾಷ್ಟ್ರದಿಂದ ಬಂದವರಾದರೆ, ನಾಲ್ವರು ಮಹಿಳೆಯರು (39,20,19,15 ವರ್ಷದವರು) ಜೂ.14ರಂದು ಪಾಸಿಟಿವ್ ಬಂದ ಮಹಾರಾಷ್ಟ್ರದಿಂದ ಬಂದ 32ರ ಹರೆಯದ ಯುವಕನ (ಪಿ.6843) ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ ಎಂದು ಡಿಎಚ್‌ಓ ಡಾ.ಸೂಡ ತಿಳಿಸಿದರು.

14 ಮಂದಿಯಲ್ಲಿ 9 ಮಂದಿ ಉಡುಪಿ ತಾಲೂಕಿನವರು, ಇಬ್ಬರು ಕುಂದಾಪುರ ತಾಲೂಕಿನವರು (ನರ್ಸ್ ಮತ್ತು ಪೊಲೀಸ್) ಹಾಗೂ ಮೂವರು ಕಾರ್ಕಳ ತಾಲೂಕಿನವರು. ಇವರಲ್ಲಿ 6 ಮಂದಿ ಪುರುಷರು, ಏಳು ಮಂದಿ ಮಹಿಳೆಯರು ಹಾಗೂ ಒಬ್ಬ 7 ವರ್ಷದ ಬಾಲಕ ಸೇರಿದ್ದಾನೆ. ಪುರುಷರಲ್ಲಿ ಇಬ್ಬರು ಹಿರಿಯ ನಾಗರಿಕರು.

7 ಮಂದಿ ಬಿಡುಗಡೆ:  ಇಂದು ಒಟ್ಟು ಏಳು ಮಂದಿ ಸೋಂಕಿತರು ರೋಗದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಐವರು ಕುಂದಾಪುರ ಹಾಗೂ ಇಬ್ಬರು ಕಾರ್ಕಳ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಈ ಮೂಲಕ ಒಟ್ಟು 969 ಮಂದಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಟ್ಟು 108 ಮಂದಿ ಸಕ್ರೀಯ ಕೇಸುಗಳು ಇವೆ ಎಂದು ಡಾ.ಸೂಡ ವಿವರಿಸಿದರು.

53 ನೆಗೆಟಿವ್: ಇಂದು 53 ಮಂದಿಯ ಗಂಟಲು ದ್ರವದ ಮಾದರಿ ನೆಗೆಟಿವ್ ಆಗಿ ಬಂದಿವೆ. ಸೋಮವಾರ ಒಟ್ಟು 12 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು ಇಬ್ಬರು, ಕೋವಿಡ್ ಸಂಪರ್ಕಿತ ಒಬ್ಬರು, ಉಸಿರಾಟ ತೊಂದರೆಯವರು ಒಬ್ಬರು, ಶೀತಜ್ವರದಿಂದ ಬಳಲುವ 6 ಮಂದಿ ಹಾಗೂ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ ಇಬ್ಬರು ಸೇರಿದ್ದಾರೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 13424 ಕ್ಕೇರಿದೆ. ಇವುಗಳಲ್ಲಿ ಈವರೆಗೆ 12135 ನೆಗೆಟಿವ್, 1077 ಪಾಸಿಟಿವ್ ಆಗಿವೆ. ಇನ್ನು ಒಟ್ಟು 212 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಸೋಮವಾರ 13 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಉಸಿರಾಟ ತೊಂದರೆಯವರು ಐವರು ಹಾಗೂ ಶೀತಜ್ವರದಿಂದ ಬಳಲುವ ಎಂಟು ಮಂದಿ ಇದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 17 ಮಂದಿ ಬಿಡುಗಡೆಗೊಂಡಿದ್ದು, 77 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 16 ಮಂದಿ ಸೇರಿದಂತೆ ಒಟ್ಟು 5719 ಮಂದಿಯನ್ನು ಕೊರೋನ ತಪಾಸಣೆಗೆ ಈವರೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 729 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್ ‌ಚಂದ್ರ ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News