ಅಸ್ವಸ್ಥಗೊಂಡ ಭದ್ರತಾ ಸಿಬ್ಬಂದಿಯ ನೆರವಿಗಾಗಿ ನದಿ ದಾಟಿ, ಹಲವು ಕಿ.ಮೀ. ನಡೆದ ಶಾಸಕ
ಐಜ್ವಾಲ್,ಜೂ.22: ಮಿಝೊರಾಂ ಶಾಸಕ ಝಡ್.ಆರ್.ಥಿಯಮ್ ಸಂಗಾ ಅವರು ನದಿಯೊಂದನ್ನು ದಾಟಿ,ಹಲವಾರು ಕಿ.ಮೀ.ಗಳನ್ನು ಕಾಲ್ನಡಿಗೆಯಲ್ಲಿ ಸಾಗಿ ಅನಾರೋಗ್ಯ ಪೀಡಿತ ಭದ್ರತಾ ಸಿಬ್ಬಂದಿಗೆ ನೆರವಾಗುವ ಮೂಲಕ ಸುದ್ದಿಯಾಗಿದ್ದಾರೆ.
ವೈದ್ಯರಾಗಿರುವ ಥಿಯಮ್‌ಸಂಗಾ 2018ರಲ್ಲಿ ಮಿಝೊರಾಂ ವಿಧಾನಸಭೆಗೆ ಆಯ್ಕೆಯಾದ ಬಳಿಕ ತನ್ನ ನಿಯಮಿತ ಪ್ರಾಕ್ಟೀಸ್‌ನ್ನು ನಿಲ್ಲಿಸಿದ್ದಾರಾದರೂ ಆಗಾಗ್ಗೆ ಸ್ಟೆಥಾಸ್ಕೋಪ್‌ನ್ನು ಏರಿಸಿಕೊಂಡು ದೂರಪ್ರದೇಶಗಳಲ್ಲಿ ತೆರಳಿ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ನೆರವಾಗುತ್ತಾರೆ.
ಕೊರೋನ ವೈರಸ್ ಹರಡುವುದನ್ನು ತಡೆಯಲು ಜನರ ಚಲನವಲನಗಳನ್ನು ನಿಯಂತ್ರಿಸಲು ಭಾರತ-ಮ್ಯಾನ್ಮಾರ್ ಗಡಿಯ ತಿಯಾವು ನದಿ ಬಳಿಯ ಪ್ರದೇಶದಲ್ಲಿ ಇಂಡಿಯಾ ರಿಸರ್ವ್ ಬಟಾಲಿಯನ್‌ನ ಸಿಬ್ಬಂದಿಗಳ ತಂಡವನ್ನು ನಿಯೋಜಿಸಲಾಗಿದೆ. ತಂಡದ ಸದಸ್ಯನೋರ್ವ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆಂಬ ಮಾಹಿತಿ ಪಡೆದ ಥಿಯಮ್ ಸಂಗಾ ಶನಿವಾರ ತನ್ನ ವೈದ್ಯ ಪುತ್ರ್ರಿಯೊಂದಿಗೆ ಅಲ್ಲಿಗೆ ಧಾವಿಸಿದ್ದರು. ಆದರೆ ಅವರ ವಾಹನ ನದಿಯನ್ನು ದಾಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಾಹನದಿಂದಿಳಿದು ನದಿಯನ್ನು ದಾಟಿ ಹಲವಾರು ಕಿ.ಮೀ. ನಡೆದು ಭದ್ರತಾ ಸಿಬ್ಬಂದಿಗಳ ಶಿಬಿರವನ್ನು ತಲುಪಿದ್ದರು.
ಅಸ್ವಸ್ಥ ಯೋಧನಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮುಂದಿನ ಚಿಕಿತ್ಸೆಗಾಗಿ ಚಂಫಾಯಿ ಜಿಲ್ಲಾಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನೂ ಥಿಯಮ್‌ಸಂಗಾ ಮಾಡಿದ್ದಾರೆ.