ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಕುಡುಕರ ಹಾವಳಿ: ಮದ್ಯದ ಬಾಟಲಿಗಳು ಪತ್ತೆ
ಉಡುಪಿ, ಜೂ.22: ವಾಯು ವಿಹಾರ ತಾಣ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ಹಾಗೂ ಭುಜಂಗ ಪಾರ್ಕಿನಲ್ಲಿ ಕುಡುಕರ ಹಾವಳಿ ಯಿಂದಾಗಿ ಸೋಮವಾರ ಜಿಲ್ಲಾ ನಾಗರಿಕ ಸಮಿತಿ ಹಾಗೂ ಸ್ವಚ್ಚ ಭಾರತ್ ಫ್ರೆಂಡ್ಸ್ ನಡೆಸಿದ ಸ್ವಚ್ಛತಾ ಕಾರ್ಯದಲ್ಲಿ ರಾಶಿ ರಾಶಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಅಜ್ಜರಕಾಡು ಭುಜಂಗ ಪಾರ್ಕ್‌ಗೆ ಹಿರಿಯ ನಾಗರಿಕರು, ಚಿಕ್ಕ ಮಕ್ಕಳು, ವಾಯು ವಿಹಾರಿಗಳು ಬರುತ್ತಾರೆ. ಇಲ್ಲಿ ಕುಡುಕುರ ಹಾವಳಿಯಿಂದಾಗಿ ಸಾರ್ವಜನಿಕರು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲದಿದ್ದರೂ ಇಲ್ಲಿ ಕಾನೂನಿಗೆ ವಿರುದ್ಧ ವಾಗಿ ರಾತ್ರಿಯ ಹೊತ್ತಿನಲ್ಲಿ ಮದ್ಯಗೋಷ್ಠಿಗಳು ನಡೆಯುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಹುತಾತ್ಮ ಸೈನಿಕರ ಸ್ಮಾರಕದ ವಠಾರದಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಮಹಾ ಅಪರಾಧವಾಗಿದೆ. ಜಿಲ್ಲಾ ಡಳಿತವು ಅಜ್ಜರಕಾಡು ಪಾರ್ಕಿಗೆ ಕಾವಲುಗಾರನ ವ್ಯವಸ್ಥೆ, ಪೊಲೀಸ್ ಗಸ್ತು, ಬೆಳಕಿನ ವ್ಯವಸ್ಥೆಗಳೊಂದಿಗೆ ಇಲ್ಲಿಗೆ ಬರುವ ಸಾರ್ವಜನಿಕ ರಿಗೆ ಸುರಕ್ಷೆ ಒದಗಿಸ ಬೇಕೆಂದು ಜಂಟಿ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಹಾಗೂ ಸ್ವಚ್ಚ ಭಾರತ ಫ್ರೆಂಡ್ಸ್‌ನ ಸಂಯೋಜಕ ರಾಘವೇಂದ್ರ ಪ್ರಭು, ಕರ್ವಾಲು, ಜೇಸಿ ಉಡುಪಿ ಸಿಟಿ ಪೂರ್ವಾದ್ಯಕ್ಷ ಜಗದೀಶ್ ಶೆಟ್ಟಿ, ಉದಯ ನಾಯ್ಕ ಹಾಜರಿದ್ದರು.