''ಅವರ ಹೆಣಗಳನ್ನು ರಸ್ತೆಗಳಲ್ಲಿ ಹರಡುತ್ತೇವೆ ಎಂದು ಕಪಿಲ್ ಮಿಶ್ರಾಗೆ ಹೇಳಿದ್ದ ದಿಲ್ಲಿ ಪೊಲೀಸ್ ಅಧಿಕಾರಿ''
ಹೊಸದಿಲ್ಲಿ : ''ಚಿಂತಿಸಬೇಡಿ, ಅವರು ಜನ್ಮಗಳ ಕಾಲ ನೆನಪಿನಲ್ಲಿಡುವಂತೆ ಅವರ ಹೆಣಗಳನ್ನು ರಸ್ತೆಗಳಲ್ಲಿ ಹರಡುತ್ತೇವೆ''-ಹೀಗೆಂದು ದಿಲ್ಲಿಯ ಗೋಕುಲ್ಪುರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ಅನುಜ್ ಕುಮಾರ್ ಅವರು ದೂರವಾಣಿಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರಿಗೆ ಭರವಸೆ ನೀಡಿದ್ದನ್ನು ತಾವು ಕೇಳಿದ್ದಾಗಿ ಈಶಾನ್ಯ ದಿಲ್ಲಿಯ ಚಾಂದ್ ಬಾಗ್ ನಿವಾಸಿ ರುಬೀನಾ ಬಾನು ಎಂಬವರು ಮಾರ್ಚ್ 18ರಂದು ದಿಲ್ಲಿ ಹಿಂಸಾಚಾರದ ಕುರಿತಂತೆ ನೀಡಿದ್ದ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆಂದು caravanmagazine.in ವರದಿ ಮಾಡಿದೆ.
ಚಾಂದ್ ಬಾಗ್‍ನ ಸಿಎಎ ವಿರೋಧಿ ಪ್ರತಿಭಟನಾ ಸ್ಥಳದಲ್ಲಿ ಫೆಬ್ರವರಿ 24ರಂದು ಬೆಳಗ್ಗೆ ಏನು ನಡೆಯಿತೆಂಬುದನ್ನು ರುಬೀನಾ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ಚಾಂಗ್ ಬಾಗ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ಮಹಿಳೆಯರಲ್ಲಿ ರುಬೀನಾ ಕೂಡ ಸೇರಿದ್ದರು.
ಗರ್ಭಿಣಿಯಾಗಿರುವ ರುಬೀನಾ ತಮ್ಮ ದೂರಿನಲ್ಲಿ ತಿಳಿಸಿದಂತೆ ಆ ದಿನ ಅವರು ಪ್ರತಿಭಟನಾ ಸ್ಥಳಕ್ಕೆ ಬೆಳಗ್ಗೆ 11 ಗಂಟೆಗೆ ಬಂದಾಗ ಅಲ್ಲಿ ಪೊಲೀಸರೇ ತುಂಬಿದ್ದರು. ಪೊಲೀಸರು ಪ್ರತಿಭಟನಾನಿರತ ಮಹಿಳೆಯರ ಜತೆ ವಾಗ್ವಾದ ನಡೆಸುತಿದ್ದರು ಹಾಗೂ ನಿಂದನಾತ್ಮಕ ಭಾಷೆ ಪ್ರಯೋಗಿಸಿ ಪ್ರತಿಭಟನೆ ಮುಂದುವರಿಸಿದರೆ ಅವರನ್ನು ಕೊಲ್ಲಲಾಗುವುದು ಎಂದು ಎಚ್ಚರಿಸಿದ್ದರು ಎಂದು ಆಕೆ ದೂರಿದ್ದರು.
''ನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿರುವಾಗ ನೀವೇಕೆ ಹೀಗೆ ಹೇಳುತ್ತೀರಿ ಎಂದು ನಾನು ಎಸಿಪಿ ಅನುಜ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು `ಕಪಿಲ್ ಮಿಶ್ರಾ ಮತ್ತವರ ಸಹವರ್ತಿಗಳು ನಿಮಗೆ ನಿಮ್ಮ ಜೀವದಿಂದ ಮುಕ್ತಿ ನೀಡುತ್ತಾರೆ' ಎಂದು ಹೇಳಿದರು,'' ಎಂದು ರುಬೀನಾ ತನ್ನ ದೂರಿನಲ್ಲಿ ವಿವರಿಸಿದ್ದಾರೆ.
''ಈ ಸಂದರ್ಭ ಕಪಿಲ್ ಮಿಶ್ರಾ ಅವರು ಠಾಣಾಧಿಕಾರಿ ತಾರಕೇಶ್ವರ ಸಿಂಗ್ ಅವರಿಗೆ ಕರೆ ಮಾಡಿದಾಗ ಅವರು ಕಪಿಲ್ ಮಿಶ್ರಾ ಲೈನ್‍ನಲ್ಲಿದ್ದಾರೆಂದು ಫೋನ್ ಅನ್ನು ಅನುಜ್ ಕುಮಾರ್ ಅವರಿಗೆ ನೀಡಿದ್ದರು. ಆಗ ಸ್ವಲ್ಪ ದೂರ ಹೋಗಿ ಮಾತನಾಡಿದ ಅನುಜ್ ಕುಮಾರ್ ``ಚಿಂತಿಸಬೇಡಿ, ನಿಮ್ಮ ಆಜ್ಞೆಯಂತೆ ನಡೆದುಕೊಳ್ಳುತ್ತೇವೆ. ಈ ಜನರನ್ನು ಇಂದು ಜೀವಂತವಾಗಿ ಬಿಡುವುದಿಲ್ಲ. ಅವರಿಗೆ ಅವರ ಸ್ವಾತಂತ್ರ್ಯ ನೀಡುವ ತನಕ ನಿಲ್ಲಿಸುವುದಿಲ್ಲ, ಅವರು ಜನ್ಮಗಳ ತನಕ ನೆನಪಿಡುವಂತೆ ಅವರ ಹೆಣಗಳನ್ನು ರಸ್ತೆಗಳಲ್ಲಿ ಹರಡುತ್ತೇವೆ ಎಂದು ಹೇಳಿ ನಂತರ ತಾರಕೇಶ್ವರ್ ಮತ್ತಿತರರತ್ತ ತಿರುಗಿ 'ಮಾರೋ ಸಾಲೋಂ ಕೊ' ಎಂದು ಹೇಳಿದ್ದನ್ನು ಕೇಳಿದ್ದೇನೆ,'' ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾಗಿ caravanmagazine.in ಸಂದರ್ಶನದಲ್ಲಿ ರುಬೀನಾ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳೊಂದಿಗೆ ತಮ್ಮ ಕುತ್ತಿಗೆಗಳಿಗೆ ಬಟ್ಟೆ ಸುತ್ತಲ್ಪಟ್ಟ ಹಾಗೂ ಕೈಗಳಲ್ಲಿ ಲಾಠಿ, ಕೋಲು, ಕತ್ತಿ, ಕಲ್ಲು, ಬಂದೂಕು ಹಾಗೂ ಬಾಂಬ್‍ಗಳನ್ನು ಹಿಡಿದ ಹಲವು ಜನರು ನಿಂತಿದ್ದರು,'' ಎಂದೂ ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಆಕೆಯ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಿಸದೇ ಇದ್ದ ಪೊಲೀಸರು ಇದೀಗ ಆ ದೂರನ್ನು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದೂ ರುಬೀನಾ ಆರೋಪಿಸಿದ್ದಾರೆ.