ದಿಲ್ಲಿ ದಂಗೆ ಪ್ರಕರಣ: ಜಾಮಿಯಾ ವಿದ್ಯಾರ್ಥಿನಿ ಸಫೂರಾ ಝರ್ಗರ್‌ಗೆ ಜಾಮೀನು ಮಂಜೂರು

Update: 2020-06-23 14:12 GMT

ಹೊಸದಿಲ್ಲಿ,ಜೂ.23: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಬಂಧಿಸಲ್ಪಟ್ಟಿರುವ ದಿಲ್ಲಿಯ ಜಾಮಿಯಾ ಮಿಲ್ಲಿಯಾ ವಿವಿಯ ಎಂ.ಫಿಲ್ ವಿದ್ಯಾರ್ಥಿನಿ ಸಫೂರಾ ಝರ್ಗರ್ ಅವರಿಗೆ ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಐದು ತಿಂಗಳ ಗರ್ಭಿಣಿಯಾಗಿರುವ ಸಫೂರಾ(27)ರನ್ನು ಕಳೆದ ಫೆಬ್ರವರಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದಿದ್ದ ದಂಗೆಗಳಿಗೆ ಸಂಬಂಧಿಸಿದಂತೆ ಒಳಸಂಚು ಆರೋಪದಲ್ಲಿ ಎ.10ರಂದು ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ಲಭಿಸಿತ್ತಾದರೂ ಇನ್ನಷ್ಟು ಗುರುತರ ಆರೋಪಗಳನ್ನು ಹೊರಿಸಿ ಯುಎಪಿಎ ಅಡಿ ಮತ್ತೆ ಬಂಧಿಸಲಾಗಿತ್ತು. ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದ ದಿಲ್ಲಿ ಪೊಲೀಸರ ಕ್ರಮವನ್ನು ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರು ಬಲವಾಗಿ ಖಂಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಫೂರಾ ಪರ ಮತ್ತು ವಿರೋಧಿ ಅಭಿಯಾನಗಳು ನಡೆದಿದ್ದವು.

ತನಿಖೆಗೆ ಅಡ್ಡಿಯನ್ನುಂಟು ಮಾಡಬಹುದಾದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಮತ್ತು ಅನುಮತಿಯಿಲ್ಲದೆ ದಿಲ್ಲಿಯನ್ನು ತೊರೆಯದಂತೆ ಉಚ್ಚ ನ್ಯಾಯಾಲಯವು ಅವರಿಗೆ ನಿರ್ದೇಶ ನೀಡಿದೆ. ಜಾಮೀನಿಗಾಗಿ 10,000 ರೂ.ಗಳ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಮತ್ತು ಕನಿಷ್ಠ 15 ದಿನಗಳಿಗೊಮ್ಮೆ ತನಿಖಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಅವರಿಗೆ ನ್ಯಾಯಾಲಯವು ಸೂಚಿಸಿದೆ.

ಪೊಲೀಸರನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಜಾಮೀನು ಅರ್ಜಿಯನ್ನು ವಿರೋಧಿಸಲಿಲ್ಲ. ಸಫೂರಾ ಅವರಿಗೆ ಮಾನವೀಯತೆಯ ನೆಲೆಯಲ್ಲಿ ಜಾಮೀನು ನೀಡಬಹುದು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ರವಿವಾರ ಸಫೂರಾರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದ ದಿಲ್ಲಿ ಪೊಲೀಸರು,ಆಕೆ ಗರ್ಭಿಣಿಯಾಗಿದ್ದಾರೆ ಎಂಬ ಅಂಶವು ಅವರ ಅಪರಾಧದ ಗಂಭೀರತೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಹೇಳಿದ್ದರು.

ಜಾಮಿಯಾ ಸಮನ್ವಯ ಸಮಿತಿಯ ಸದಸ್ಯೆಯಾಗಿರುವ ಸಫೂರಾ ಗುರುವಾರ ವಿಚಾರಣಾ ನ್ಯಾಯಾಲಯವು ಜಾಮೀನು ನಿರಾಕರಿಸಿದ ಬಳಿಕ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News