×
Ad

ಮನೆ, ಕಚೇರಿಯಿಂದಲೇ ಜನರ ಸೇವೆ: ಐವನ್ ಡಿಸೋಜಾ

Update: 2020-06-23 15:06 IST

ಮಂಗಳೂರು, ಜೂ.23: ವಿಧಾನ ಪರಿಷತ್‌ನ ಸದಸ್ಯನಾಗಿ ಆರು ವರ್ಷಗಳ ಸೇವಾವಧಿಯ ಇಂದು ಕೊನೆಯ ದಿನವಾಗಿದ್ದು, ಜನರ ಸರಕಾರಿ ಸೇವೆಗಳನ್ನು ಮನೆಯ ಕಚೇರಿ ಮೂಲಕವೇ ಮುಂದುವರಿಸಲಿದ್ದೇನೆ ಎಂದು ಐವನ್ ಡಿಸೋಜಾ ಹೇಳಿದ್ದಾರೆ.

ಪಾಲಿಕೆ ಕಟ್ಟಡದ ಕಚೇರಿಯಲ್ಲಿ ವಿಧಾನ ಪರಿಷತ್‌ನ ಸದಸ್ಯಾವಧಿಯ ತಮ್ಮ ಕೊನೆಯ ಪತ್ರಿಕಾಗೋಷ್ಠಿ ನಡೆಸಿದ ಅವರು, 2014ರಿಂದ ಈವರೆಗೆ ಶಾಸನ ಸಭೆಯ ಎಲ್ಲಾ ಸಭೆಗಳಿಗೆ ಹಾಜರಾಗಿ ಜನರ ಪರ ಧ್ವನಿ ಎತ್ತಿದ ತೃಪ್ತಿ ತಮಗಿದೆ ಎಂದರು.

ಮುಂದೆಯೂ ಜನರ ಅಗತ್ಯ ಸೇವೆಗಳನ್ನು ಮಾಡುವ ಜತೆಗೆ ಪಕ್ಷವನ್ನು ಬಲಿಷ್ಠವಾಗಿಸಲು ಹೆಚ್ಚಿನ ಸಮಯವನ್ನು ನೀಡಲಿದ್ದೇನೆ. ಜತೆಗೆ ವಕೀಲ ವೃತ್ತಿಯನ್ನೂ ಮುಂದುವರಿಸುವುದಾಗಿ ಐವನ್ ಡಿಸೋಜಾ ಹೇಳಿದರು.

ಸರಕಾರಿ ಮುಖ್ಯ ಸಚೇತಕನಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಹೆಮ್ಮೆ ಇದ್ದು, ಸಂಸದೀಯ ಕಾರ್ಯದರ್ಶಿ(ಕಂದಾಯ ಇಲಾಖೆ)ಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಅಧಿವೇಶನದಲ್ಲಿ ನಿಗದಿತ ಅವಧಿಯಲ್ಲಿ ಕೇಳಲು ಅವಕಾಶವಿರುವ ಪ್ರಶ್ನೆಗಳನ್ನು ಕೇಳಿ, ಗಮನ ಸೆಳೆಯುವ ಸೂಚನೆಗಳು, ಚರ್ಚೆಗಳಲ್ಲಿ ಭಾಗವಹಿಸುವ ಜತೆಗೆ ಸದನದಲ್ಲಿ ಬೀಡಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ಬಗ್ಗೆ ಗಮನ ಸೆಳೆದು ಸದನವೀರ ಪ್ರಶಸ್ತಿಯನ್ನೂ ಪಡೆದಿರುವ ಬಗ್ಗೆ ತೃಪ್ತಿ ಇದೆ ಎಂದರು.

ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಮೇಲ್ಛಾವಣಿ ಘಟಕವ್ನನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದನೆಗೆ ಹೆಚ್ಚು ಗಮನ ನೀಡಬೇಕೆಂದು ಪ್ರಸ್ತಾಪಿಸಿ, ದ.ಕ. ಜಿಲ್ಲೆಯಲ್ಲಿ ಅಭಿಯಾನ ಆರಂಭಿಸಿ ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆಯಲ್ಲಿ ದ.ಕ. ಜಿಲ್ಲೆ 2ನೆ ಸ್ಥಾನ ಪಡೆಯುವಲ್ಲಿ ಶ್ರಮ ವಹಿಸಿರುವುದಾಗಿ ಅವರು ಹೇಳಿದರು.

ಶಾಸಕರ ನಿಧಿಯಿಂದ ಸರಕಾರಿ ಮತ್ತು ಅನುದಾನಿತ 25 ಶಾಲೆಗಳಿಗೆ 3 ಕಿ.ವ್ಯಾಟ್‌ನ ಸೌರಶಕ್ತಿ ಘಟಕಗಳನ್ನು ಒದಗಿಸಿದ್ದೇನೆ. ಪೆರಾಬೆಯ ಎಂಡೋಪೀಡಿತರ ಮನೆಗಳಿಗೆ ಸೌರಶಕ್ತಿ ನೀಡುವ ಕಾರ್ಯ ಮಾಡಲಾಗಿದೆ. ವಿವಿಧ ನಿಗಮ, ಯೋಜನೆ, ಅಭಿವೃದ್ಧಿ ಕಾರ್ಯಗಳಡಿ ಒಟ್ಟು 46 ಕೋಟಿ ರೂ. ಅನುದಾನವನ್ನು ಸರಕಾರದಿಂದ ಪಡೆಯಲಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಡಿ 6.62 ಕೋಟಿ ರೂ.ಗಳ ಪರಿಹಾರವನ್ನು 1600 ಕ್ಕೂ ಅಧಿಕ ಅರ್ಜಿದಾರರಿಗೆ ವಿತರಿಸಲಾಗಿದೆ. ಇದೇ ವೇಳೆ ಸುಮಾರು 63 ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದು, ಪತ್ನಿ ಡಾ. ಕವಿತಾ ಡಿಸೋಜಾ ಸಹಾಯದಿಂದ 350ಕ್ಕೂ ಅಧಿಕ ಉಚಿತ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ, 3500ಕ್ಕೂ ಅಧಿಕ ಜನರಿಗೆ ಉಚಿತ ಕನ್ನಡಕವನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ರಿಕ್ಷಾ ಚಾಲಕರಿಗೆ ಸುಸಜ್ಜಿತ ರಿಕ್ಷಾ ತಂಗುದಾಣಗಳ ನಿರ್ಮಾಣದಡಿ ಕರಾವಳಿ ಜಿಲ್ಲೆಯಲ್ಲಿ 68 ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ರಿಕ್ಷಾ ನಿಲ್ದಾಣಕ್ಕೆ ಹಿಂದೆ ಶಾಸಕರ ಅನುದಾನ ಉಪಯೋಗಿಸುವಂತಿರಲಿಲ್ಲ. ಇದನ್ನು ಶಾಸನ ಸಭೆಯಲ್ಲಿ ಪ್ರಶ್ನಿಸಿ, ಕಾನೂನಿನ ತಿದ್ದುಪಡಿ ತಂದು ಶಾಸಕರ ಅನುದಾನದಿಂದ ಅನುಷ್ಠಾನಗೊಳಿಸಲಾಗಿದೆ. ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯ ನಿಟ್ಟಿನಲ್ಲಿ ಮಾಡಿದ ಪ್ರಯತ್ನದ ಫಲವಾಗಿ 2019-20ನೆ ಬಜೆಟ್‌ನಲ್ಲಿ 200 ಕೋಟಿ ರೂ. ಅನುದಾನದೊಂದಿಗೆ ನಿಗಮ ಸ್ಥಾಪನೆಗೆ ಸರಕಾರ ಕ್ರಮ ಕೈಗೊಂಡಿದೆ. ಒಟ್ಟಿನಲ್ಲಿ ಆರು ವರ್ಷಗಳ ಅವಧಿಯಲ್ಲಿ ವಿಧಾನ ಪರಿಷತ್‌ನ ಶಾಸಕನಾಗಿಯೂ ಜನರ ಸೇವೆಯನ್ನು ಅತ್ಯುತ್ತಮವಾಗಿ ನಿರ್ವಹಿಸಬಹುದು ಎಂಬುದನ್ನು ತಾನು ನಿೂಪಿಸಿರುವುದಾಗಿ ಅವರು ಹೇಳಿದರು.

ಈ ಸಂದರ್ಭ ಐವನ್ ಡಿಸೋಜಾರನ್ನು ಅವರ ಅಭಿಮಾ ಬಳಗ ಹೂಹಾರ ಹಾಕಿ ಅಭಿನಂದಿಸಿತು. ಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್, ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ನ್ಯಾಯವಾದಿ ಮನುರಾಜ್, ನಾಗೇಂದ್ರ ಕುಮಾರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News