ಬ್ರಿಟಿಷರ ವಿರುದ್ಧ ಸಿಡಿದೆದ್ದ ಸ್ವಾತಂತ್ರ್ಯ ಹೋರಾಟಗಾರ ಕುಂಞಿ ಅಹ್ಮದ್ ಪಾತ್ರದಲ್ಲಿ ಬರಲಿದ್ದಾರೆ ಈ ಸೂಪರ್‌ ಸ್ಟಾರ್

Update: 2020-06-23 12:25 GMT
ಪೃಥ್ವಿರಾಜ್

ತಿರುವನಂತಪುರ : ಕೇರಳದ ಮಲಬಾರ್ ಪ್ರದೇಶದಲ್ಲಿ 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಸ್ವಾತಂತ್ರ್ಯ ಹೋರಾಟಗಾರ ವರಿಯಮಕುನ್ನತ್ ಕುಂಞಿ ಅಹ್ಮದ್ ಅವರ ಸಾಹಸ ಕಥಾನಕ ಬೆಳ್ಳಿಪರದೆಯಲ್ಲಿ ಮಿಂಚಲಿದೆ. ಅಶ್ವಿಕ್ ಅಬು ನಿರ್ದೇಶನದ ವರಿಯಮಕುನ್ನತ್ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ಕುಂಞಿ ಅಹ್ಮದ್ ಪಾತ್ರ ನಿರ್ವಹಿಸಲಿದ್ದಾರೆ.

ಮಲಬಾರ್ ಪ್ರದೇಶದಲ್ಲಿ ದಂಗೆ ಎದ್ದ 100 ವರ್ಷಾಚರಣೆ ಸಂದರ್ಭದಲ್ಲಿ ಅಂದರೆ 2021ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಕೇರಳದ ಸಾಮ್ರಾಜ್ಯಶಾಹಿ ಇತಿಹಾಸದಲ್ಲಿ ದಂಗೆಕೋರ ನಾಯಕ ಎಂದು ದಾಖಲಾಗಿರುವ ಕುಂಞಿ ಅಹ್ಮದ್ ಹಾಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಶ್ರೀಮಂತ ಮುಸ್ಲಿಂ ಕುಟುಂಬದಲ್ಲಿ 1870ರ ದಶಕದಲ್ಲಿ ಹುಟ್ಟಿದ ಅವರು, ಬ್ರಿಟಿಷರು ಸ್ಥಳೀಯರಿಗೆ ಮತ್ತು ತಮ್ಮದೇ ಕುಟುಂಬದ ಹಿರಿಯರಿಗೆ ನೀಡುತ್ತಿದ್ದ ಚಿತ್ರಹಿಂಸೆ ಮತ್ತು ಅನ್ಯಾಯದ ಕಥೆಗಳನ್ನು ಕೇಳುತ್ತಲೇ ಬೆಳೆದವರು. ಅವರ ತಂದೆ ಮೊಯ್ದಿನ್ ಕುಟ್ಟಿ ಹಾಜಿಯವರನ್ನು ಬ್ರಿಟಿಷರ ವಿರುದ್ಧ ದಂಗೆ ಎದ್ದ ಕಾರಣಕ್ಕೆ ಗಡೀಪಾರು ಮಾಡಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಜೈಲಿನಲ್ಲಿಡಲಾಗಿತ್ತು. ಇಂಥ ಘಟನೆಗಳು ಬಾಲ್ಯದಲ್ಲೇ ಹಾಜಿಯವರನ್ನು ಹೋರಾಟಕ್ಕೆ ಪ್ರೇರೇಪಿಸಿದ್ದವು.

ಹಾಜಿಯವರು ಸಾಂಪ್ರದಾಯಿಕ ಸಂಗೀತದ ಬಗ್ಗೆ ಅಪಾರ ಒಲವು ಹೊಂದಿದ್ದರು. ಸ್ಥಳೀಯವಾಗಿ ಮಲಪ್ಪುರಂ ಪಡಪ್ಪಾಟ್ ಮತ್ತು ಬದ್ರ್ ಪಡಪ್ಪಾಟ್ ಪದಗಳ ಮೂಲಕ ಕಲೆಯನ್ನು ಬ್ರಿಟಿಷರ ವಿರುದ್ಧ ಸಂಘಟನೆಗೆ ಸಮರ್ಥವಾಗಿ ಬಳಸಿಕೊಂಡ ನಾಯಕ ಅವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News