ಭಾರತದ ವಿಶೇಷ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಅಮೆರಿಕ

Update: 2020-06-23 15:22 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಜೂ. 23: ಅಮೆರಿಕ ಸರಕಾರವು ಸೋಮವಾರ ಭಾರತದಿಂದ ಬರುವ ವಿಶೇಷ ವಿಮಾನಗಳಿಗೆ ನಿರ್ಬಂಧ ಹೇರಿದೆ ಹಾಗೂ ಎರಡು ದೇಶಗಳ ನಡುವಿನ ವಿಮಾನ ಹಾರಾಟಕ್ಕೆ ಸಂಬಂಧಿಸಿದ ಒಪ್ಪಂದವನ್ನು ಉಲ್ಲಂಘಿಸುವ ಮೂಲಕ ಭಾರತವು ‘ಅನುಚಿತ ಹಾಗೂ ತಾರತಮ್ಯಕರ ವರ್ತನೆ’ಯಲ್ಲಿ ತೊಡಗಿದೆ ಎಂದು ಅಮೆರಿಕ ಆರೋಪಿಸಿದೆ.

ಕೋವಿಡ್-19 ಪ್ರಯಾಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಕರೆತರುವುದಕ್ಕಾಗಿ ಏರ್ ಇಂಡಿಯ ಕಂಪೆನಿಯು ಅಮೆರಿಕಕ್ಕೆ ವಿಮಾನಗಳನ್ನು ಕಳುಹಿಸುತ್ತಿದೆ, ಆದರೆ, ಅದು ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಟಿಕೆಟ್‌ಗಳನ್ನೂ ಮಾರಾಟ ಮಾಡುತ್ತಿದೆ ಎಂದು ಅಮೆರಿಕದ ಸಾರಿಗೆ ಇಲಾಖೆ ಆರೋಪಿಸಿದೆ.

ಅದೇ ವೇಳೆ, ಅಮೆರಿಕದ ವಿಮಾನಗಳು ಭಾರತಕ್ಕೆ ಹಾರದಂತೆ ಅಲ್ಲಿನ ಸರಕಾರ ನಿಷೇಧ ವಿಧಿಸಿದೆ ಎಂದು ಸಾರಿಗೆ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಪರಿಸ್ಥಿತಿಯು ಅಮೆರಿಕದ ವಿಮಾನಯಾನ ಕಂಪೆನಿಗಳಿಗೆ ಸ್ಪರ್ಧಾತ್ಮಕ ಹಿನ್ನಡೆಯನ್ನುಂಟು ಮಾಡಿದೆ ಎಂದು ಅದು ಹೇಳಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಗಿಂತಲೂ ಮೊದಲಿದ್ದ ಹಾರಾಟಗಳ ಅರ್ಧಕ್ಕೂ ಹೆಚ್ಚಿನ ಸಂಖ್ಯೆಯ ಹಾರಾಟಗಳನ್ನು ಈಗ ನಿರ್ವಹಿಸುತ್ತಿರುವುದಾಗಿ ಏರ್ ಇಂಡಿಯದ ಜಾಹೀರಾತು ಹೇಳುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ‘‘ಭಾರತದ ವಿಶೇಷ ವಿಮಾನಗಳ ಸಂಖ್ಯೆ ಭಾರತಕ್ಕೆ ವಾಪಸಾಗುವವರ ಸಂಖ್ಯೆಯ ಅನುಪಾತವನ್ನು ಮೀರಿದೆ. ಭಾರತವು ವಿಶೇಷ ವಿಮಾನಗಳ ಮೂಲಕ ಅಮೆರಿಕ ವಿಧಿಸಿರುವ ಹಾರಾಟ ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದೆ ಎಂಬಂತೆ ಕಂಡುಬರುತ್ತಿದೆ’’ ಎಂದು ಅದು ಹೇಳಿದೆ.

ಈ ಆದೇಶವು 30 ದಿನಗಳಲ್ಲಿ ಜಾರಿಗೆ ಬರುತ್ತದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News