×
Ad

ಅಂಚೆ ಮೂಲಕ ಮತದಾನ ಮಾಡಲು ಕೋವಿಡ್-19 ರೋಗಿಗಳಿಗೆ ಅವಕಾಶ

Update: 2020-06-23 19:49 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.23: ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೋವಿಡ್-19ಗೆ ಪಾಸಿಟಿವ್ ಆಗಿರುವ ಮತದಾರರು ಅಂಚೆ ಮೂಲಕ ತಮ್ಮ ಮತಗಳನ್ನು ಚಲಾಯಿಸಲಿದ್ದಾರೆ.

ಕೋವಿಡ್-19 ರೋಗಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅಂಚೆ ಮತಪತ್ರಗಳನ್ನು ಬಳಸಲು ಅವಕಾಶ ಕಲ್ಪಿಸಲು ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ಇಲಾಖೆಯು ಚುನಾವಣಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಶಾಸಕಾಂಗ ಇಲಾಖೆಯು ಚುನಾವಣಾ ಆಯೋಗಕ್ಕೆ ನೋಡಲ್ ಏಜೆನ್ಸಿಯಾಗಿದೆ.

 ಕೊರೋನ ವೈರಸ್ ಪಿಡುಗು ಈ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೋಂಕಿತರು ಅಂಚೆ ಮೂಲಕ ಮತದಾನ ಮಾಡಲು ಸಾಧ್ಯವಾಗುವಂತೆ ನಿಯಮಗಳನ್ನು ಪರಿಷ್ಕರಿಸಲು ಚುನಾವಣಾ ಆಯೋಗವು ಕಾನೂನು ಸಚಿವಾಲಯವನ್ನು ಕೋರಿಕೊಂಡಿತ್ತು.

ಇತ್ತೀಚಿಗಷ್ಟೇ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವೈಕಲ್ಯ ಹೊಂದಿರುವವರು ಅಂಚೆ ಮತಪತ್ರ ಬಳಸಲು ಸರಕಾರವು ಅನುಮತಿ ನೀಡಿತ್ತು. ಈಗ ಈ ಪಟ್ಟಿಯಲ್ಲಿ ಕೋವಿಡ್ -19 ಸೋಂಕಿತರು ಅಥವಾ ಲಕ್ಷಣಗಳನ್ನು ಹೊಂದಿದವರನ್ನು ಸೇರಿಸಲಾಗಿದೆ.

ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗು ಆರಂಭಗೊಂಡ ಬಳಿಕ ಬಿಹಾರವು ವಿಧಾನಸಭಾ ಚುನಾವಣೆ ನಡೆಯುವ ಮೊದಲ ರಾಜ್ಯವಾಗಲಿದೆ.

ಬಿಹಾರದಲ್ಲಿ ಸುಮಾರು 7.20 ಕೋಟಿ ಮತದಾರರಿದ್ದು,243 ಸದಸ್ಯಬಲದ ವಿಧಾನಸಭೆಯು ಈ ವರ್ಷದ ನ.29ರಂದು ಅಂತ್ಯಗೊಳ್ಳಲಿದೆ ಮತ್ತು ಅದಕ್ಕೂ ಮೊದಲು ನೂತನ ವಿಧಾನಸಭೆ ರಚನೆಯಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News