ಕೇಂದ್ರದಿಂದ ರಾಜ್ಯಗಳಿಗೆ 1,340 ಸ್ವದೇಶಿ ವೆಂಟಿಲೇಟರ್ ಪೂರೈಕೆ

Update: 2020-06-23 14:21 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.23: ಕೋವಿಡ್-19 ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ನಿಧಿಯಡಿ ಮಂಜೂರಾದ 50,000 ಮೇಡ್ ಇನ್ ಇಂಡಿಯಾ ವೆಂಟಿಲೇಟರ್‌ಗಳ ಪೈಕಿ 2,923 ವೆಂಟಿಲೇಟರ್‌ಗಳು ಈವರೆಗೆ ತಯಾರಾಗಿದ್ದು, 1,340 ವೆಂಟಿಲೇಟರ್‌ಗಳನ್ನು ವಿವಿಧ ರಾಜ್ಯಗಳಿಗೆ ಪೂರೈಸಲಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ಮಂಗಳವಾರ ತಿಳಿಸಿದೆ.

 ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ 3,100 ಕೋ.ರೂ.ಗಳನ್ನು ಹಂಚಿಕೆ ಮಾಡಲು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ಮೇ 14ರಂದು ನಿರ್ಧರಿಸಿತ್ತು. ಇತರ ಉದ್ದೇಶಗಳ ಜೊತೆಗೆ ವೆಂಟಿಲೇಟರ್‌ಗಳ ಖರೀದಿ ಮತ್ತು ವಲಸೆ ಕಾರ್ಮಿಕರ ಹಿತಚಿಂತನೆಗೆ ಈ ಹಣವನ್ನು ಬಳಸಲು ಸೂಚಿಸಲಾಗಿತ್ತು. 3,100 ಕೋ.ರೂ.ಗಳ ಪೈಕಿ 2,000ಕೋ.ರೂ.ಗಳನ್ನು ಸ್ವದೇಶಿ ನಿರ್ಮಿತ ವೆಂಟಿಲೇಟರ್‌ಗಳ ಖರೀದಿಗಾಗಿ ನಿಗದಿಗೊಳಿಸಲಾಗಿತ್ತು.

ಕೇಂದ್ರದಿಂದ ವೆಂಟಿಲೇಟರ್‌ಗಳನ್ನು ಸ್ವೀಕರಿಸಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ದಿಲ್ಲಿ(ತಲಾ 275), ಗುಜರಾತ(175), ಬಿಹಾರ(100),ಕರ್ನಾಟಕ(90) ಮತ್ತು ರಾಜಸ್ಥಾನ(75) ಸೇರಿವೆ ಎಂದು ತಿಳಿಸಿರುವ ಹೇಳಿಕೆಯು,ಈ ತಿಂಗಳ ಅಂತ್ಯದೊಳಗೆ ಇನ್ನೂ 14,000 ವೆಂಟಿಲೇಟರ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗುವುದು ಎಂದಿದೆ.

ಮಂಜೂರಾಗಿರುವ 50,000 ವೆಂಟಿಲೇಟರ್‌ಗಳ ಪೈಕಿ ಸರಕಾರಿ ಸ್ವಾಮ್ಯದ ಬಿಇಎಲ್ 30,000 ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ. 20,000 ವೆಂಟಿಲೇಟರ್‌ಗಳನ್ನು ನಾಲ್ಕು ಖಾಸಗಿ ಕಂಪನಿಗಳು ತಯಾರಿಸುತ್ತಿವೆ.

ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಈಗಾಗಲೇ 1,000 ಕೋ.ರೂ.ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. ಈ ಪೈಕಿ 34 ಕೋ.ರೂ.ಗಳು ಕರ್ನಾಟಕಕ್ಕೆ ಲಭಿಸಿವೆ.

                      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News