×
Ad

ಚೀನಾ ಗಡಿಯಲ್ಲಿ ಬಿಕ್ಕಟ್ಟಿಗೆ ಸರಕಾರದ ತಪ್ಪು ನಿರ್ವಹಣೆ ಕಾರಣ: ಸೋನಿಯಾ ಗಾಂಧಿ

Update: 2020-06-23 19:58 IST

ಹೊಸದಿಲ್ಲಿ,ಜೂ.23: ಚೀನಾ ಗಡಿಯಲ್ಲಿನ ವಿಷಮ ಸ್ಥಿತಿ ಸೇರಿದಂತೆ ದೇಶವು ಪ್ರಸಕ್ತ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ತಪ್ಪು ನಿರ್ವಹಣೆ ಮತ್ತು ಅದರ ತಪ್ಪು ನೀತಿಗಳು ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಇಲ್ಲಿ ಟೀಕಿಸಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,ತೀವ್ರ ಆರ್ಥಿಕ ಬಿಕ್ಕಟ್ಟು,ಬೃಹತ್ ಸಾಂಕ್ರಾಮಿಕ ಪಿಡುಗು ಮತ್ತು ಇದೀಗ ಚೀನಾ ಗಡಿಯಲ್ಲಿ ಗಂಭೀರ ಬಿಕ್ಕಟ್ಟು ಭಾರತಕ್ಕೆ ಭಾರೀ ಆಘಾತವನ್ನುಂಟು ಮಾಡಿವೆ. ಈ ಪ್ರತಿಯೊಂದೂ ಬಿಕ್ಕಟ್ಟಿಗೆ ಸರಕಾರದ ನಿರ್ವಹಣಾ ವೈಫಲ್ಯ ಮತ್ತು ಅದು ಅನುಸರಿಸಿದ್ದ ತಪ್ಪು ನೀತಿಗಳೇ ಪ್ರಮುಖ ಕಾರಣಗಳಾಗಿವೆ. ಇದರ ಒಟ್ಟಾರೆ ಪರಿಣಾಮವಾಗಿ ವ್ಯಾಪಕ ಸಂಕಷ್ಟ,ಭೀತಿ ಸೃಷ್ಟಿಯಾಗಿವೆ ಮತ್ತು ದೇಶದ ಭದ್ರತೆ ಹಾಗೂ ಪ್ರಾದೇಶಿಕ ಅಖಂಡತೆಗೆ ಅಪಾಯವೆದುರಾಗಿದೆ ಎಂದು ಹೇಳಿದರು.

‘ಸರಕಾರವು ಪರಿಸ್ಥಿತಿಯನ್ನು ಅತ್ಯಂತ ತಪ್ಪು ರೀತಿಯಲ್ಲಿ ನಿರ್ವಹಿಸಿದೆ ಎಂಬ ಭಾವನೆ ಜನರಲ್ಲಿ ಬೆಳೆಯುತ್ತಿದೆ. ಭವಿಷ್ಯವು ಇನ್ನಷ್ಟೇ ತೆರೆದುಕೊಳ್ಳಬೇಕಿದೆ,ಆದರೆ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಸರಕಾರದ ಕ್ರಮಗಳು ಪ್ರಬುದ್ಧ ಮುತ್ಸದ್ದಿತನ ಮತ್ತು ನಿರ್ಣಾಯಕ ನಾಯಕತ್ವದಿಂದ ಕೂಡಿರುತ್ತವೆ ಎಂದು ನಾವು ಆಶಿಸಿದ್ದೇವೆ ’ಎಂದು ಹೇಳಿದ ಸೋನಿಯಾ,ಕೊರೋನ ವೈರಸ್ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಗಾಗಿ ಮತ್ತು ಆರ್ಥಿಕತೆಯ ದುಃಸ್ಥಿತಿಗಾಗಿ ಸರಕಾರದ ವಿರುದ್ಧ ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News