×
Ad

ಉಡುಪಿ: ಮಹಿಳಾ ಪೊಲೀಸ್ ಸಿಬ್ಬಂದಿ ಸಹಿತ 11 ಮಂದಿಗೆ ಕೊರೋನ ಪಾಸಿಟಿವ್

Update: 2020-06-23 20:20 IST

ಉಡುಪಿ, ಜೂ. 23: ಬೈಂದೂರು ಪೊಲೀಸ್ ಠಾಣೆಯ 37ರ ಹರೆಯದ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಒಟ್ಟು 11 ಮಂದಿ ಉಡುಪಿ ಜಿಲ್ಲೆಯಿಂದ ಮಂಗಳವಾರದ ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಮಹಿಳಾ ಪೊಲೀಸ್ ಸಿಬ್ಬಂದಿಗೆ ಅದೇ ಠಾಣೆಯಲ್ಲಿ ರವಿವಾರ ಸೋಂಕು ಪತ್ತೆಯಾದ 39ರ ಹರೆಯದ ಪೊಲೀಸ್ ಸಿಬ್ಬಂದಿಯ ಸಂಪರ್ಕದಿಂದ ಸೋಂಕು ತಗಲಿರಬೇಕು ಎಂದು ಶಂಕಿಸಲಾಗಿದೆ. ಅದೇ ರೀತಿ ಬೈಂದೂರಿನ 55ರ ಹರೆಯದ ಮಹಿಳೆಯೊಬ್ಬರಿಗೆ ಕಳೆದ ಮೇ 24ರಂದು ಪಾಸಿಟಿವ್ ಬಂದ 26ರ ಹರೆಯದ ಯುವಕನ ಸಂಪರ್ಕದಿಂದ ಇಂದು ಪಾಸಿಟಿವ್ ಬಂದಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.

ಇಂದು ಕೊರೋನ ವೈರಸ್‌ಗೆ ಪಾಸಿಟಿವ್ ಆದ 11 ಮಂದಿಯಲ್ಲಿ ಐವರು ಮಹಾರಾಷ್ಟ್ರದಿಂದ ಬಂದವರು. ಉಳಿದ ನಾಲ್ವರು ವಿದೇಶಗಳಿಂದ ಬಂದವರು. ಇವರಲ್ಲಿ ಕುವೈತ್ ‌ನಿಂದ ಬಂದವರು ಇಬ್ಬರು, ಸೌದಿ ಅರೇಬಿಯಾದಿಂದ ಬಂದವರು ಒಬ್ಬರು ಹಾಗೂ ದುಬೈನಿಂದ ಬಂದವರು. ಉಳಿದಿಬ್ಬರು ಸ್ಥಳೀಯರು ಎಂದು ಡಾ.ಸೂಡ ತಿಳಿಸಿದರು.

11 ಮಂದಿಯಲ್ಲಿ 10 ಮಂದಿ ಕುಂದಾಪುರ ತಾಲೂಕಿನವರಾದರೆ, ಒಬ್ಬರು ಉಡುಪಿಯವರು. ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ 10 ವರ್ಷದೊಳಗಿನ ಪ್ರಾಯದ ಮೂವರು ಬಾಲಕರು ಹಾಗೂ ಒಬ್ಬ ಬಾಲಕಿ ಸೇರಿದ್ದಾರೆ. ಇವರೆಲ್ಲರನ್ನೂ ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡ ಲಾಗುತ್ತಿದೆ.

ಇಂದು ಬಂದ 11 ಪಾಸಿಟಿವ್‌ಗಳೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 1088ಕ್ಕೇರಿದೆ. ಉಡುಪಿ ಜಿಲ್ಲೆ ಈಗಲೂ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ನಗರ 1505 ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ 1232 ಪ್ರಕರಣಗಳೊಂದಿಗೆ ಕಲಬುರಗಿ ಎರಡನೇ ಸ್ಥಾನದಲ್ಲಿದೆ. ಯಾದಗಿರಿ 894 ಕೇಸುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

9 ಮಂದಿ ಬಿಡುಗಡೆ:  ಇಂದು ಒಟ್ಟು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಒಟ್ಟು 9 ಮಂದಿ ಸೋಂಕಿತರು ರೋಗದಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಐವರು ಕುಂದಾಪುರ, ಮೂವರು ಎಸ್‌ಡಿಎಂ ಕುತ್ಪಾಡಿಯಿಂದ ಹಾಗೂ ಒಬ್ಬರು ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆ ಯಿಂದ ಬಿಡುಗಡೆ ಗೊಂಡಿದ್ದಾರೆ. ಈ ಮೂಲಕ ಒಟ್ಟು 978 ಮಂದಿ ಜಿಲ್ಲೆ ಯಲ್ಲಿ ಇಂದಿನವರೆಗೆ ಬಿಡುಗಡೆಗೊಂಡಿದ್ದು, ಒಟ್ಟು 108 ಮಂದಿ ಈಗಲೂ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

202 ಸ್ಯಾಂಪಲ್ ಸಂಗ್ರಹ: ಮಂಗಳವಾರ 11 ಪಾಸಿಟಿವ್ ಕೇಸುಗಳೊಂದಿಗೆ 47 ಮಂದಿಯ ಗಂಟಲು ದ್ರವದ ಮಾದರಿ ನೆಗೆಟಿವ್ ಆಗಿ ಬಂದಿವೆ. ಮಂಗಳವಾರ ಇನ್ನೂ ಒಟ್ಟು 202 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಗಳನ್ನು ಸೋಂಕಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 94, ಕೋವಿಡ್ ಸಂಪರ್ಕಿತರು 29, ಉಸಿರಾಟ ತೊಂದರೆ ಯವರು 4, ಶೀತಜ್ವರದಿಂದ ಬಳಲುವ 17 ಹಾಗೂ ಕೋವಿಡ್ ಹಾಟ್‌ಸ್ಪಾಟ್ ಗಳಿಂದ ಬಂದ 58 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದರು.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 13626 ಕ್ಕೇರಿದೆ. ಇವುಗಳಲ್ಲಿ ಈವರೆಗೆ 12182 ನೆಗೆಟಿವ್, 1088 ಪಾಸಿಟಿವ್ ಆಗಿವೆ. ಇನ್ನು ಒಟ್ಟು 356 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಮಂಗಳವಾರ 10 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾ ಗಿದೆ. ಇವರಲ್ಲಿ ಕೋವಿಡ್ ಶಂಕಿತರು 2, ಉಸಿರಾಟ ತೊಂದರೆಯವರು 4 ಹಾಗೂ ಶೀತಜ್ವರದಿಂದ ಬಳಲುವ 4 ಮಂದಿ ಇದ್ದಾರೆ.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಶನ್ ವಾರ್ಡ್‌ಗಳಿಂದ ಇಂದು 7 ಮಂದಿ ಬಿಡುಗಡೆಗೊಂಡಿದ್ದು, 80 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯು ತಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 26 ಮಂದಿ ಸೇರಿದಂತೆ ಒಟ್ಟು 5745 ಮಂದಿಯನ್ನು ಕೊರೋನ ತಪಾಸಣೆಗೆ ಈವರೆಗೆ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 702 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ ಚಂದ್ರ ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News