ದ.ಕ.ದಲ್ಲಿ ಎಂಟು ಮಂದಿಗೆ ಕೊರೋನ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 453ಕ್ಕೇರಿಕೆ
ಮಂಗಳೂರು, ಜೂ. 23: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎಂಟು ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 453ಕ್ಕೆ ಏರಿಕೆಯಾಗಿದ್ದು, ಈ ಪೈಕಿ 10 ಮಂದಿ ಹೊರ ಜಿಲ್ಲೆಯವರು. ಈ ನಡುವೆ ಆರು ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಸ್ವೀಕೃತವಾದ ವರದಿಯಲ್ಲಿ ಎಂಟು ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ಪೈಕಿ ಕುವೈತ್‌ನಿಂದ ಓರ್ವ, ಪಿ-8318ರ ಪ್ರಾಥಮಿಕ ಸಂಪರ್ಕ ಹೊಂದಿದ್ದ ನಾಲ್ವರು, ಐಎಲ್‌ಐ ಪ್ರಕರಣದಲ್ಲಿ ಓರ್ವ, ಎಸ್‌ಎಎಆರ್‌ಐ ಪ್ರಕರಣದಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ.
ಪಿ-8918ರ ಪ್ರಾಥಮಿಕ ಸಂಪರ್ಕದಲ್ಲಿದ್ದ 28, 25 ವರ್ಷದ ಮಹಿಳೆಯರು, 17, 50 ವರ್ಷದ ನಾಲ್ವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. 49 ವರ್ಷದ ಪುರುಷ ಹಾಗೂ 59 ವರ್ಷದ ಮಹಿಳೆಯು ಮಂಗಳೂರಿನ ನಿವಾಸಿಗಳಾಗಿದ್ದು, ಇವರನ್ನು ಎಸ್‌ಎಎಆರ್‌ಐ ಪ್ರಕರಣಕ್ಕೆ ಸೇರ್ಪಡೆ ಮಾಡಲಾಗಿದೆ. 27 ವರ್ಷದ ಮಂಗಳೂರಿನ ಮಹಿಳೆಯನ್ನು ‘ಇನ್‌ಫ್ಲೂಯೆಂಝಾ ಲೈಕ್ ಇಲ್‌ನೆಸ್’ ಪ್ರಕರಣಕ್ಕೆ ಸೇರ್ಪಡೆಗೊಳಿಸಲಾಗಿದೆ.
ಜೂ.17ರಂದು ಕುವೈತ್‌ನಿಂದ ಆಗಮಿಸಿದ್ದ 27 ವರ್ಷದ ಯುವಕನನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈತನ ವರದಿಯಲ್ಲೂ ಸೋಂಕು ದೃಢಪಟ್ಟಿತ್ತು. ಎಲ್ಲ ಸೋಂಕಿತರನ್ನು ಜಿಲ್ಲಾ ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ,. ರೂಪೇಶ್ ತಿಳಿಸಿದ್ದಾರೆ.
ಆರು ಮಂದಿ ಗುಣಮುಖ: ಸಮಾಧಾನಕರ ಬೆಳವಣಿಗೆಯಲ್ಲಿ ಮಂಗಳವಾರ ಮತ್ತೆ ಆರು ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಜೂ.11ರಂದು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 38 ವರ್ಷದ ಗರ್ಭಿಣಿ ಮಹಿಳೆಯನ್ನು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಬಾಣಂತಿಯ ವರದಿಯು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ 256 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ.
ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 52 ವರ್ಷ ವಯಸ್ಸಿನ ವ್ಯಕ್ತಿ ಮಧುಮೇಹ ಮತ್ತು ಅರ್ಬುದ ರೋಗದಿಂದ ಬಳಲುತ್ತಿದ್ದು ಐಸಿಯುನಲ್ಲಿದ್ದಾರೆ.
ಮಂಗಳವಾರ ಒಟ್ಟು 142 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ ಎಂಟು ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 286 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 179 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.