×
Ad

ಪತಂಜಲಿಯ ‘ಕೊರೋನ ಔಷಧಿ’ಗೆ ಆಯುಷ್ ಸಚಿವಾಲಯ ತಡೆ: ಔಷಧಿ ಬಗ್ಗೆ ವಿವರಗಳನ್ನು ನೀಡುವಂತೆ ಸೂಚನೆ

Update: 2020-06-23 20:59 IST

ಹೊಸದಿಲ್ಲಿ, ಜೂ.23: ಕೋವಿಡ್-19 ಸೋಂಕು ರೋಗವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುವ ಔಷಧಿಯನ್ನು ತಾನು ಕಂಡುಹಿಡಿದಿರುವೆನೆಂದು ಯೋಗ ಗುರು ಬಾಬಾರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯ ಹೇಳಿಕೆಗೆ ಕೇಂದ್ರ ಆಯುಷ್ ಸಚಿವಾಲಯ ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಔಷಧಿ ಉತ್ಪನ್ನ ಪರಿಶೀಲನೆಯನ್ನು ತಾನು ಸಮರ್ಪಕವಾಗಿ ನಡೆಸುವವರೆಗೆ, ಅದರ ಬಗ್ಗೆ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಅದು ಸೂಚಿಸಿದೆ. ಅಷ್ಟೇ ಅಲ್ಲದೆ ಈ ಔಷಧಿಗಳ ಸಂಯೋಜನೆಯ ವಿವರಗಳನ್ನು ಕೂಡಾ ನೀಡುವಂತೆ ತಿಳಿಸಿದೆ.

ಕೋವಿಡ್-19 ರೋಗವನ್ನು ಗುಣಪಡಿಸುವವಂತಹ ಕೊರೋನಿಲ್ ಹಾಗೂ ಶ್ವಾಸರಿ ಎಂಬ ಔಷಧಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಪತಂಜಲಿ ಆಯುರ್ವೇದ ಸಂಸ್ಥೆಯು ಘೋಷಿಸಿತ್ತು. ಆದರೆ ಈ ಔಷಧಿ ಉತ್ಪನ್ನಗಳ ರೋಗ ನಿವಾರಣಾ ಸಾಮರ್ಥ್ಯದ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನದ ವಿವರಗಳು ತನಗೆ ತಿಳಿದುಬಂದಿಲ್ಲವೆಂದು ಆಯುಷ್ ಸಚಿವಾಲಯ ತಿಳಿಸಿದೆ.

ಕೊರೋನಿಲ್ ಹಾಗೂ ಶ್ವಾಸರಿ ಔಷಧಿಗಳ ಸ್ಯಾಂಪಲ್‌ಗಳ ವಿವರಗಳನ್ನು ಕೂಡಾ ಒದಗಿಸುವವಂತೆ ಅದು ಸೂಚಿಸಿದೆ. ಔಷಧಿಯ ಸಂಶೋಧನಾತ್ಮಕ ಅಧ್ಯಯನ ನಡೆದ ಸ್ಥಳಗಳು ಹಾಗೂ ಆಸ್ಪತ್ರೆಗಳ ಕುರಿತು ಮಾಹಿತಿಯನ್ನು ಕೂಡಾ ಅದು ಕೇಳಿದೆ. ಔಷಧಿಗೆ ಇನ್ಸಿಟಿಟ್ಯೂಶನಲ್ ಎಥಿಕ್ಸ್ ಕಮಿಟಿಯ ಅನುಮೋದನೆ ದೊರೆತಿದೆಯೇ ಎಂಬ ಬಗ್ಗೆ ವಿವರಗಳನ್ನು ಸಲ್ಲಿಸಬೇಕೆಂದು ಸಚಿವಾಲಯವು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕೊರೋನ ವೈರಸ್ ಸೋಂಕನ್ನು ಗುಣಪಡಿಸುತ್ತದೆಂದು ಹೇಳಲಾದ ಕೊರೊನಿಲ್ ಔಷಧಿಯನ್ನು ಪತಂಜಲಿ ಆಯುರ್ವೇದಸಂಸ್ಥೆ ಬಿಡುಗಡೆಗೊಳಿಸಿದ ಕೆಲವೇ ತಾಸುಗಳ ಬಳಿಕ ಆಯುಷ್ ಈ ಪತ್ರಿಕಾ ಹೇಳಿಕೆ ನೀಡಿದೆ.

ಕೊರೋನಿಲ್ ಉತ್ಪಾದನೆಗೆ ನೀಡಲಾದ ಅನುಮೋದನೆ ಹಾಗೂ ಪರವಾನಿಗೆಯ ಪ್ರತಿಗಳನ್ನು ಕೂಡಾ ತನಗೆ ಒದಗಿಸಬೇಕೆಂದು ಸಚಿವಾಲಯವು ಉತ್ತರಾಖಂಡ ಸರಕಾರಕ್ಕೆ ಸೂಚಿಸಿದೆ. ಪತಂಜಲಿ ಸಂಸ್ಥೆಯ ಮುಖ್ಯ ಕಾರ್ಯಾಲಯವು ಉತ್ತರಾಖಂಡದ ಹರಿದ್ವಾರದಲ್ಲಿದೆ

280 ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗ: ಪತಂಜಲಿ

ಮಂಗಳವಾರ ಕೊರೊನಿಲ್ ಹಾಗೂ ಶ್ವಾಸರಿ ಹೆಸರಿನ ಎರಡು ಔಷಧಿಗಳನ್ನು ಪತಂಜಲಿ ಸಂಸ್ಥೆಯು, ಬಿಡುಗಡೆಗೊಳಿಸಿತ್ತು. ಸೋಂಕಿತ ವ್ಯಕ್ತಿಗಳಲ್ಲಿ ಈ ಔಷಧಿಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದ್ದು ಶೇ.100ರಷ್ಟು ಉತ್ತಮ ಫಲಿತಾಂಶಗಳನ್ನು ತೋರಿಸಿರುವುದಾಗಿ ಬಾಬಾ ರಾಮ್‌ದೇವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ದಿಲ್ಲಿ ಹಾಗೂ ಅಹಮದಾಬಾದ್ ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ 280 ರೋಗಿಗಳ ಮೇಲೆ ಈ ಔಷಧಿಗಳ ಕ್ಲಿನಿಕಲ್ ಅಧ್ಯಯನವನ್ನು ನಡೆಸಿರುವುದಾಗಿ ಅದು ತಿಳಿಸಿತ್ತು. ಈ ಔಷಧಿಯನ್ನು ಪಡೆದ ರೋಗಿಗಳ ಚೇತರಿಕೆಯ ಪ್ರಮಾಣವು ಶೇ.100ರಷ್ಟಿದೆಯೆಂದು ರಾಮ್‌ದೇವ್ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News