×
Ad

ಭಾರತ-ಚೀನಾ ಮಿಲಿಟರಿ ಮಾತುಕತೆ ‘ಸಕಾರಾತ್ಮಕ’: ಉದ್ವಿಗ್ನತೆ ಶಮನಕ್ಕೆ ಇತ್ತಂಡಗಳಲ್ಲಿ ಸಹಮತ

Update: 2020-06-23 21:49 IST

ಹೊಸದಿಲ್ಲಿ, ಜೂ.23: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಭೀಕರ ಘರ್ಷಣೆಯ ಆನಂತರ ಭಾರತ ಹಾಗೂ ಚೀನಾ ನಡುವೆ ನಡೆದ ಎರಡನೆ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ, ಪ್ರಸಕ್ತ ಸಂಘರ್ಷಾವಸ್ಥೆಯಿಂದ ಹಿಂದೆ ಸರಿಯುವ ಬಗ್ಗೆ ಇತ್ತಂಡಗಳಲ್ಲಿಯೂ ಪರಸ್ಪರ ಸಹಮತವೇರ್ಪಟ್ಟಿದೆ ಎಂದು ಭಾರತೀಯ ಸೇನಾಪಡೆ ಮಂಗಳವಾರ ತಿಳಿಸಿದೆ.

ಗಲ್ವಾನ್ ಕಣಿವೆ ಸಮೀಪದ ವಾಸ್ವತ ಗಡಿನಿಯಂತ್ರಣ ರೇಖೆ ಬಳಿ ಚೀನಿ ಸೇನೆ ಜಮಾವಣೆಗೊಂಡ ಹಿನ್ನೆಲೆಯಲಿ ಏರ್ಪಟ್ಟಿದ್ದ ಉದ್ವಿಗ್ನಸ್ಥಿತಿಯನ್ನು ಶಮನಗೊಳಿಸಲು ಜೂನ್ 6ರಂದು ನಡೆದ ಮೊದಲ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದು, ಉದ್ವಿಗ್ನ ಶಮನಗೊಳಿಸುವ ಕುರಿತು ಒಪ್ಪಂದವೇರ್ಪಟ್ಟಿತ್ತು. ಆದರೆ ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಿಂದಾಗಿ ಒಪ್ಪಂದವು ಮುರಿದುಬಿದ್ದಿತ್ತು. ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಿ ಯೋಧರ ನಡುವೆ ಜೂ.15ರಂದು ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಮೃತಪಟ್ಟು, 75ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಸೋಮವಾರ ಉಭಯದೇಶಗಳ ಮಿಲಿಟರಿ ಅಧಿಕಾರಿಗಳ ಜೊತೆ ನಡೆದ 11 ತಾಸುಗಳ ಮಾತುಕತೆಯು ‘‘ಸೌಹಾರ್ದಯುತ, ಸಕಾರಾತ್ಮಕ ಹಾಗೂ ರಚನಾತ್ಮಕ ವಾತಾವರಣದಲ್ಲಿ’’ ನಡೆಯಿತು ಹಾಗೂ ಪೂರ್ವ ಲಡಾಖ್‌ನ ಎಲ್ಲಾ ಪ್ರದೇಶಗಳಿಂದಲೂ ಸೇನಾಪಡೆಗಳು ಹಿಂದೆ ಸರಿಯುವುದಕ್ಕೆ ಸಂಬಂಧಿಸಿದ ವಿಧಾನಗಳನ್ನು ಹೊಸದಿಲ್ಲಿ ಹಾಗೂ ಬೀಜಿಂಗ್‌ಗಳು ಮುಂದಕ್ಕೊಯ್ಯಲ್ಲಿವೆ ಎಂದು ಸೇನಾಧಿಕಾರಿಗಳು ತಿಳಿಸಿವೆ.

ಸೋಮವಾರ ನಡೆದ ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ ಮಾತುಕತೆಯು ಪೂರ್ವ ಲಡಾಖ್‌ನ ಚುಸುಲ್ ಸೆಕ್ಟರ್‌ಗೆ ಎದುರು ಚೀನಾದ ಭಾಗದಲ್ಲಿರುವ ಮೊಲ್ಡೊ ಎಂಬಲ್ಲಿ ನಡೆಯಿತು. ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್‌ನ 14ನೇ ಕಾರ್ಪ್ಸ್ ಕಮಾಂಡಿಂಗ್‌ನ ಜನರಲ್ ಅಧಿಕಾರಿ ಲೆ.ಜ. ಹರೀಂದರ್ ಸಿಂಗ್ ವಹಿಸಿದ್ದರು. ಚೀನಾ ಸೇನಾ ನಿಯೋಗದ ನೇತೃತ್ವವನ್ನು ಮೇಜರ್ ಜನರಲ್ ಲಿಯು ಲಿನ್ ವಹಿಸಿದ್ದರು.

ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷೆ ಮಂಗಳವಾರ ನೀಡಿದ ಹೇಳಿಕೆಯೊಂದರಲ್ಲಿ ಭಾರತದ ಜೊತೆಗಿನ ಗಡಿ ಬಿಕ್ಕಟ್ಟನ್ನು ನರೇಂದ್ರ ಮೋದಿ ಸರಕಾರವು ತಪ್ಪಾಗಿ ನಿಭಾಯಿಸುತ್ತಿದೆಯೆಂದು ಆಪಾದಿಸಿದ್ದಾರೆ. ಏಪ್ರಿಲ್‌ನಿಂದೀಚೆಗೆ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ, ಹಲವಾರು ಸಲ ಗಡಿ ಉಲ್ಲಂಘನೆಗಳ ಘಟನೆಗಳು ನಡೆದಿದೆಯೆಂದು ನಿರಾಕರಿಸಲಾಗದ ವಾಸ್ತವವಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News