ಕಳೆದ 5 ದಿನಗಳಲ್ಲಿ ಚೀನಿ ಹ್ಯಾಕರ್‌ಗಳಿಂದ ಕನಿಷ್ಠ 40,300 ಸೈಬರ್ ದಾಳಿ: ಮಹಾರಾಷ್ಟ್ರ ಸೈಬರ್ ಪೊಲೀಸ್ ಬಹಿರಂಗ

Update: 2020-06-23 16:45 GMT

ಮುಂಬೈ, ಜೂ.23: ಗುಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಭೀಕರ ಸಂಘರ್ಷ ನಡೆದ ಬೆನ್ನಲ್ಲೇ, ಕಳೆದ ಐದು ದಿನಗಳಲ್ಲಿ ಚೀನಿ ಹ್ಯಾಕರ್‌ಗಳಿಂದ 40,300ಕ್ಕೂ ಅಧಿಕ ಸೈಬರ್ ದಾಳಿ ಯತ್ನಗಳು ನಡೆದಿರುವುದಾಗಿ ಮಹಾರಾಷ್ಟ್ರದ ಸೈಬರ್ ಭದ್ರತಾ ದಳವು ತಿಳಿಸಿದೆ.

‘‘ಕಳೆದ 4-5 ದಿನಗಳಿಂದ ಭಾರತೀಯ ಸೈಬರ್ ರಂಗದಲ್ಲಿ, ಸೈಬರ್ ಅಪರಾಧ ಚಟುವಟಿಕೆಗಳಲ್ಲಿ ಹಠಾತ್ ಹೆಚ್ಚಳವುಂಟಾಗಿದೆ. ಚೀನಾದ ಹ್ಯಾಕರ್‌ಗಳು ಮೂಲಸೌಕರ್ಯ, ಮಾಹಿತಿ ಹಾಗೂ ಬ್ಯಾಂಕಿಂಗ್‌ನಂತಹ ಕ್ಷೇತ್ರಗಳನ್ನು ಹೆಚ್ಚಾಗಿ ಗುರಿಯಿರಿಸಿದ್ದಾರೆ’’ ಎಂದು ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಸೈಬರ್ ಭದ್ರತಾ ಪೊಲೀಸ್ ಮಹಾನಿರೀಕ್ಷಕ ಯಶಸ್ವಿ ಯಾದವ್ ತಿಳಿಸಿದ್ದಾರೆ

ಬಹುತೇಕ ಪ್ರಮಾಣದ ಸೈಬರ್ ದಾಳಿಗಳು ಚೀನಾದ ಸಿಚುವಾನ್ ಪ್ರಾಂತದ ರಾಜಧಾನಿಯಾದ ಚೆಂಗ್ಡು ನಗರದಿಂದ ನಡೆದಿರುವುದಾಗಿ ಅವರು ಹೇಳಿದ್ದಾರೆ.

ಆನ್‌ಲೈನ್ ಸೇವೆಗಳು ಲಭ್ಯವಾಗದಂತೆ ಮಾಡುವುದು, ಐಪಿ ಹೈಜಾಕಿಂಗ್, ಇಮೇಲ್,ಟೆಕ್ಸ್ಟ್‌ಮೆಸೇಜ್‌ಗಳ ಹ್ಯಾಕಿಂಗ್‌ನಂತಹ ಸೈಬರ್ ದಾಳಿಗಳು ನಡೆದಿರುವುದಾಗಿ ಅವರು ಹೇಳಿದ್ದಾರೆ.

ಈ ಮಧ್ಯೆ ಎಪಿಟಿ36 ಎಂಬ ಪಾಕ್ ಮೂಲದ ಹ್ಯಾಕರ್ ಗುಂಪು ಕೂಡಾ ಕಳೆದ ಮಾರ್ಚ್‌ನಿಂದ ಭಾರತದ ರಕ್ಷಣಾ ಸಂಸ್ಥೆಗಳನ್ನು ನಿರಂತರವಾಗಿ ಗುರಿಯಿಡಲು ಯತ್ನಿಸುತ್ತಿದೆಯೆಂದು ಅವರು ಹೇಳಿದ್ದಾರೆ. ಆದರೆ ಪಾಕಿಸ್ತಾನಿ ಹಾಗೂ ಚೀನಿ ಹ್ಯಾಕರ್‌ಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದು ಸ್ಪಷ್ಟವಿಲ್ಲವೆಂದವರು ಹೇಳಿದರು. ರಕ್ಷಣಾ ಸಂಸ್ಥೆಗಳಿಂದ ಮಹತ್ವದ ಮಾಹಿತಿಗಳನ್ನು ಕದಿಯಲು ಕೂಡಾ ದಾಳಿಕೋರರು ಆನ್‌ಲೈನ್ ಮೂಲಕ ಹನಿಟ್ರಾಪಿಂಗ್ ಕೂಡಾ ನಡೆಸುತ್ತಿದ್ದಾರೆಂದು ಅವರು ಹೇಳಿದರು.

ಪ್ರತಿಯೊಬ್ಬ ಸೈಬರ್ ಬಳಕೆದಾರರು ತಮ್ಮ ಆನ್‌ಲೈನ್ ಸಂಪನ್ಮೂಲಗಳನ್ನು ಸುರಕ್ಷಿತವಾಗಿಡಲು ಅಗತ್ಯವಿರುವ ಸೈಬರ್ ಭದ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News