×
Ad

ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ಸರ್ವ ಸಿದ್ಧತೆ: ಶಿಕ್ಷಣ ಇಲಾಖೆ

Update: 2020-06-23 22:27 IST

ಉಡುಪಿ, ಜೂ. 23: ಜೂ.25ರಿಂದ ರಾಜ್ಯಾದ್ಯಂತ ಪ್ರಾರಂಭಗೊಳ್ಳುವ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಹಾಜರಾಗಲು ಬೇಕಾದ ಎಲ್ಲಾ ಸುರಕ್ಷತಾ ಕ್ರಮ ಗಳನ್ನು ಕೈಗೊಳ್ಳಲಾಗಿದ್ದು, ಪೋಷಕರು ಯಾವುದೇ ರೀತಿಯ ಗಾಬರಿಗೊಳಗಾಗಬೇಕಿಲ್ಲ ಎಂದು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲರಿಗೂ ಭರವಸೆಯನ್ನು ನೀಡಿದೆ.

ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ 13,526 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯು ವವರು 586 ಮಂದಿಯಾದರೆ, ಹೊರ ಜಿಲ್ಲೆಯ 82 ಮಂದಿ ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳು 12,520 ಮಂದಿಯಾದರೆ, ರೆಗ್ಯೂಲರ್ ಪುನರಾವರ್ತಿತ ವಿದ್ಯಾರ್ಥಿಗಳು 485 ಮಂದಿ. 376 ಮಂದಿ ಖಾಸಗಿ ವಿದ್ಯಾರ್ಥಿ ಗಳು ಹಾಗೂ 145 ಖಾಸಗಿ ಪುನರಾವರ್ತಿತ ವಿದ್ಯಾಥಿಗಳು ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‌ಮೆಂಟ್ ಝೋನ್ ಎಂದು ಡಿಕ್ಲೇರ್ ಆದಲ್ಲಿ ಬದಲಿ ಕೇಂದ್ರವನ್ನು ಈಗ ಗುರುತಿಸಲಾಗಿದೆ. ಇದಕ್ಕಾಗಿ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದಲ್ಲಿ 2 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ,ಜಿಲ್ಲೆಯಲ್ಲಿ ಒಟ್ಟು 10 ಹೆಚ್ಚುವರಿ ಕೇಂದ್ರಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ.

ವಿದ್ಯಾರ್ಥಿಗಳನ್ನು ಕರೆತರಲು ಜಿಲ್ಲೆಯಲ್ಲಿ ಒಟ್ಟು 82 ಬಸ್‌ಗಳನ್ನು ಖಾಸಗಿ ಶಾಲೆಗಳಿಂದ ಪಡೆಯಲಾಗಿದೆ. ಈ ಬಸ್‌ಗಳಿಗೆ ಇಂಧನ ವೆಚ್ಚವನ್ನು ಮಾತ್ರ ಇಲಾಖೆಯಿಂದ ಭರಿಸಲಾಗುತ್ತದೆ. ಈಗಾಗಲೇ ಪ್ರಸ್ತಾವನೆಯನ್ನು ಎಸೆಸೆಲ್ಸಿ ಬೋರ್ಡಿಗೆ ಕಳುಹಿಸಲಾಗಿದೆ. ಪ್ರತಿ ತಾಲೂಕಿನಲ್ಲಿ 5 ವಾಹನಗಳನ್ನು ಹೆಚ್ಚುವರಿ ಯಾಗಿ ತಹಶೀಲ್ದಾರ್‌ರ ಹಂತದಲ್ಲಿ ಕಾಯ್ದಿರಿಸಲು ಕ್ರಮವಹಿಸಲಾಗಿದೆ. ಶಿಕ್ಷಣ ಇಲಾಖೆ ಹಂತದಲ್ಲೂ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಾಹನ ಹೊಂದಿರುವ ಚಾಲಕರನ್ನು ಗುರುತಿಸಿ ಆಪತ್ಕಾಲಕ್ಕೆ ಬಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ

ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಯನ್ನು ಶಾಲಾ ಹಂತದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಸಾರಿಗೆ ವ್ಯವಸ್ಥೆ ಬಗ್ಗೆ ವಿಚಾರಿಸಲಾಗಿದ್ದು ಅಗತ್ಯಬಿದ್ದವರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯ ಹಿಂದಿನ ದಿನದಂದು ಎಲ್ಲಾ ಸಿಬ್ಭಂದಿಗಳನ್ನು ಕೇಂದ್ರಕ್ಕೆ ಆಗಮಿಸಲು ಸೂಚಿಸಲಾಗಿದೆ. ಪರೀಕ್ಷೆಯ ಎಲ್ಲಾ ಮಾಹಿತಿ, ಸುರಕ್ಷತೆ, ಸುರಕ್ಷಿತಾ ಅಂತರ, ಆರೋಗ್ಯ ತಪಾಸಣೆ ಬಗ್ಗೆ ಕೇಂದ್ರ ಸಿಬ್ಭಂದಿಗಳಿಗೆ ಅಗತ್ಯ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗಿದೆ.

ಆರೋಗ್ಯ ಸಿಬ್ಭಂದಿಗಳಿಗೂ ಕೇಂದ್ರಕ್ಕೆ ಹಿಂದಿನ ದಿನ 8:30ಕ್ಕೆ ಹಾಜರಿರಲು ಸೂಚಿಸಿದೆ. ಆ ದಿನ ವಿದ್ಯಾರ್ಥಿಗಳೂ ಕೇಂದ್ರಕ್ಕೆ ಬಂದು ಅವರ ಕೊಠಡಿ/ಆಸನಗಳನ್ನು ಮುಂಚಿತವಾಗಿ ತಿಳಿಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ, ಆಸುಪಾಸಿನ ಝೇರಾಕ್ಸ್ ಅಂಗಡಿ ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ

ಕೇಂದ್ರಗಳ ಸ್ಯಾನಟೈಸ್: ಎಸೆಸೆಲ್ಸಿ ಪರೀಕ್ಷೆ ನಡೆಯುವ ಕೇವಲ ಮೂರು ಕೇಂದ್ರಗಳನ್ನು ಮಾತ್ರ ಈ ಹಿಂದೆ ಕ್ವಾರಂಟೈನ್ ಕೇಂದ್ರವಾಗಿ ಬಳಸಲಾಗಿತ್ತು. ಆದರೆ ಅವುಗಳನ್ನು ತಿಂಗಳ ಹಿಂದೆಯೇ ತೆರವುಗೊಳಿಸಿ ಹಲವು ಬಾರಿ ಸ್ಯಾನಟೈನ್ ಮಾಡಲಾಗಿದೆ. ಪರೀಕ್ಷೆಗೆ ಪೂರ್ವ ಭಾವಿಯಾಗಿಯೂ ಎಲ್ಲಾ ಕೇಂದ್ರಗಳನ್ನು ಸ್ಯಾನಿಟೈಸೇಶನ್ ಮಾಡಲು ಗ್ರಾಪಂ/ನಗರಸಭೆಯ ಮುಖ್ಯಾದಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳು 4 ಸಾಲುಗಳಲ್ಲಿ ಬರಲು ಪರೀಕ್ಷಾ ಕೇಂದ್ರಗಳಲ್ಲಿ ಬಾಕ್ಸ್‌ಗಳನ್ನು ಹಾಕಲು ಕ್ರಮವಹಿಸಲಾಗಿದೆ. ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆಯು ಸರದಿ ಸಾಲಿನಲ್ಲಿ ನಡೆಯಲಿದೆ. 200 ಮಕ್ಕಳಿಗೆ ಒಂದರಂತೆ ಥರ್ಮಲ್ ಗನ್‌ಗಳು ಈಗಾಗಲೇ ಕೇಂದ್ರಗಳಿಗೆ ಬಂದಿವೆ. ಇಬ್ಬರು ಆರೋಗ್ಯ ಕಾರ್ಯಕರ್ತ ರೂ ಪರೀಕ್ಷಾ ಕರ್ತವ್ಯದಲ್ಲಿರುವುದರಿಂದ ಅವರೂ ಥರ್ಮಲ್ ಗನ್ ತರುವಂತೆ ಸೂಚಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ, ಪ್ರಶ್ನೆ ಪತ್ರಿಕೆ ರವಾನೆ, ಉತ್ತರ ಪತ್ರಿಕೆ ದಾಸ್ತಾನು ಕೊಠಡಿಗಳಿಗೆ ಭದ್ರತೆ ವಹಿಸುವ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಪರೀಕ್ಷಾ ದಿನ ಅವ್ಯವಹಾರ ತಡೆಗಟ್ಟಲು ಸ್ಥಾನಿಕ ಜಾಗ್ರತ ದಳ, ಅನ್ಯ ಇಲಾಖಾ ಅಧಿಕಾರಿಗಳ ನಿಯೋಜನೆ, ಉಪನಿರ್ದೇಶಕರ ನೇತೃತ್ವದಲ್ಲಿ 2 ಜಾಗ್ರತ ದಳ ರಚನೆ, ಡಯಟ್‌ನ ಸಿಬ್ಬಂದಿಗಳನ್ನೂಇದಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಜಿಲ್ಲೆಯ ಎಲ್ಲಾ 51 ಕೇಂದ್ರಗಳ ಪರಿಶೀಲನೆ ನಡೆದು, 4 ಬಾರಿ ಕೇಂದ್ರ ಮುಖ್ಯಸ್ಥರ ಹಾಗೂ ಪ್ರೌಢಶಾಲಾ ಮುಖ್ಯಸ್ಥರ ಸಭೆ ಕರೆದು, ಸಾರಿಗೆ ವ್ಯವಸ್ಥೆ, ಸುರಕ್ಷತೆ, ಸಾಮಾಜಿಕ ಅಂತರ, ಥರ್ಮಲ್ ಸ್ಕಾನಿಂಗ್, ಪೋಷಕರ ನಿಯಂತ್ರಣ, ಪ್ರತಿಯೊಬ್ಬರ ಜವಾಬ್ಧಾರಿ ಬಗ್ಗೆ ಮಾಹಿತಿ ನೀಡಲಾ ಗಿದೆ. ಪ್ರತಿ ಕೇಂದ್ರಕ್ಕೂ ಹಾಗೂ ಪ್ರತಿ ಪ್ರೌಢಶಾಲೆಗಳಿಗೂ ಚೆಕ್‌ಲಿಸ್ಟ್ ನೀಡಿ ವ್ಯವಸ್ಥೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಮಾಹಿತಿ ತಿಳಿಸಿದೆ.

ಕಂಟೈನ್‌ಮೆಂಟ್ ಝೋನ್‌ನಿಂದ 3ರಿಂದ 5 ಮಂದಿ

ಈ ಬಾರಿ ಜಿಲ್ಲೆಯ ಕಂಟೈನ್‌ಮೆಂಟ್ ರೆನ್‌ನಿಂದ 3ರಿಂದ 5 ಮಂದಿ ಮಾತ್ರ ಎಸೆಸೆಲ್ಸಿ ಪರೀಕ್ಷೆ ಬರೆಯುವ ಬಗ್ಗೆ ಮಾಹಿತಿ ಶಾಲಾ ಮುಖ್ಯೋ ಪಾಧ್ಯಾಯರಿಂದ ದೊರಕಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಒಂದು ಈ ಬಾರಿ ಸೀಲ್‌ಡೌನ್‌ನಿಂದ ಪರೀಕ್ಷೆ ಬರೆಯಲು ಸಾಧ್ಯವಾಗ ದವರಿಗೆ ಮರು ಪರೀಕ್ಷೆಯ ವೇಳೆ ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶ ವನ್ನು ನೀಡಲಾಗಿದೆ. ಹೀಗಾಗಿ ಅವರು ಆತಂಕಕ್ಕೊಳಗಾಗದೇ ಮುಂದಿನ ಬಾರಿ ಫ್ರೆಷರ್ ಆಗಿ ಪರೀಕ್ಷೆ ಬರೆಯಲು ಸಾಧ್ಯವಿದೆ.

ಜಿಪಂ ಅಧ್ಯಕ್ಷರಿಂದ ಪರೀಕ್ಷಾ ಕೇಂದ್ರಗಳ ಪರಿಶೀಲನೆ

ಹಲವಾರು ಆತಂಕ, ಗೊಂದಲಗಳ ನಡುವೆ ರಾಜ್ಯ ಸರಕಾರ ಈ ಬಾರಿ ಎಸೆಸೆಲ್ಸಿ ಪರೀಕ್ಷೆ ನಡೆಸುವ ಕುರಿತು ತೀರ್ಮಾನ ಕೈಗೊಂಡಿದೆ. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಮಂಗಳವಾರ ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸರಕಾರದ ಕೋವಿಡ್-19 ಮಾರ್ಗ ಸೂಚಿಯಂತೆ ಪರೀಕ್ಷಾ ಕೇಂದ್ರದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

ಪರೀಕ್ಷಾ ಕೇಂದ್ರಗಳ ಸ್ಯಾನಟೈಸಿಂಗ್, ಮಾಕಿರ್ಂಗ್, ಕೊಠಡಿಗಳ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಮುಖ್ಯವಾಗಿ ಶೌಚಾಲಯದ ಸ್ವಚ್ಛತೆ ಬಗ್ಗೆ ಅಗತ್ಯ ಕ್ರಮ ತೆಗೆದು ಕೊಳ್ಳುವಂತೆ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ನಿರ್ದೇಶಿಸಲು ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಂಜಿರಿಗೆ ಸೂಚಿಸಿದರು.

ಪೋಷಕರು ಕೂಡಾ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿ ವಿದ್ಯಾರ್ಥಿ ಗಳ ಬಗ್ಗೆ ಜಾಗೃತೆ ವಹಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರತಾಪ್ ಹೆಗ್ಡೆ ಮಾರಾಳಿ, ಸುಮಿತ್ ಶೆಟ್ಟಿ ಕೌಡೂರು, ಶೋಭಾ ಜಿ.ಪುತ್ರನ್, ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಎಂ ಸುವರ್ಣ, ರೇಷ್ಮಾ ಉದಯ ಶೆಟ್ಟಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News