ಕಾಪು : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಜಿಪಂ ಅಧ್ಯಕ್ಷರ ತಂಡ ಭೇಟಿ
ಕಾಪು : ಕೋವಿಡ್ 19 ಮಾಹಾಮಾರಿ ವೈರಸ್‍ನಿಂದ ಮುಂದೂಡಲ್ಪಟ್ಟ ಪ್ರೌಢಶಿಕ್ಷಣ ಇಲಾಖೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಜೂನ್ 25ರಿಂದ ನಡೆಯಲಿದ್ದು, ಮಂಗಳವಾರ ಪರೀಕ್ಷೆಯ ಪೂರ್ವ ತಯಾರಿ ಕಾಪು ತಾಲ್ಲೂಕಿನ ಕೇಂದ್ರಗಳಲ್ಲಿ ನಡೆಯಿತು.
ಅದಮಾರಿನ ಪೂರ್ಣಪ್ರಜ್ಞಾ ಸಂಸ್ಥೆಗೆ ಆಗಮಿಸಿದ ಜಿಲ್ಲಾ ಪಂಚಾಯತ್ ದಿನಕರ ಬಾಬು ಅವರ ತಂಡ ಸಂಸ್ಥೆಯಲ್ಲಿ ಪರೀಕ್ಷಾ ಪೂರ್ವವಾಗಿ ನಡೆದ ತಯಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಪರೀಕ್ಷೆ ನಡೆಯಲಿರುವ ಎಲ್ಲಾ ಕೋಣೆಗಳಿಗೆ ಭೇಟಿ ನೀಡಿ, ಅಲ್ಲಿಯ ಶುಚಿತ್ವದ ಬಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಮಾಹಿತಿ ಪಡೆದರು.
ಪರೀಕ್ಷಾ ಕೇಂದ್ರಗಳು: ಕಾಪು ತಾಲೂಕಿನ ಹೆಜಮಾಡಿಯ ಸರ್ಕಾರಿ ಪ್ರೌಢಶಾಲೆ, ಅದಮಾರು ಪೂರ್ಣಪ್ರಜ್ಞ ಕಾಲೇಜಿ, ಕಾಪುವಿನ ಪೊಲಿಪು ಸರ್ಕಾರಿ ಪದವಿ ಪೂರ್ವ ಕಾಲೇಜು, ಕಟಪಾಡಿಯ ಎಸ್‍ವಿಎಸ್ ಕಾಲೇಜು, ಸೀರ್ವದ ಸೈಂಟ್‍ಮೇರೀಸ್ ಶಾಲೆಯು ಪರೀಕ್ಷಾ ಕೇಂದ್ರಗಳಾಗಿವೆ. ಈ ಕೇಂದ್ರಗಳಲ್ಲಿ ಮಾರ್ಗಸೂಚಿಗಳನ್ನು ಅಳವಡಿಸಿ ಶಿಕ್ಷಕರಿಗೆ ಪರೀಕ್ಷೆಯ ದಿನ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಪರೀಕ್ಷಾ ಕೊಠಡಿಗಳಲ್ಲಿ ಈಗಾಗಲೇ ಪರೀಕ್ಷಾ ಪ್ರವೇಶ ಪತ್ರದ ನೋಂದಣಿ ಸಂಖ್ಯೆಗಳನ್ನು ನಮೂದಿಸಲಾಗಿದೆ. ಶಾಲಾ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದು ಶಿಕ್ಷಕರು ಮಾಹಿತಿ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ವಿದ್ಯಾಂಗ ಇಲಾಖಾ ಅಧಿಕಾರಿಗಳಾದ ರಾಘರಾಮ್, ಪ್ರಭಾಕರ ಮಿತ್ತಾಂತ, ಕೃಷಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸಮೀತ್ ಶೆಟ್ಟಿ, ಪೂರ್ಣಪ್ರಜ್ಞ ಸಂಸ್ಥೆಯ ಪ್ರಾಂಶುಪಾಲ ರಾಮಕೃಷ್ಣ ಪೈ, ಉಪ ಪ್ರಾಂಶುಪಾಲೆ ಡಾ. ಒಲಿವಿಟ ಡಿಸೋಜಾ, ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.