ತಮಿಳುನಾಡು: ಲಾಕಪ್‌ನಲ್ಲಿ ತಂದೆ-ಮಗ ಸಾವು ಆರೋಪ; ವ್ಯಾಪಕ ಜನಾಕ್ರೋಶ

Update: 2020-06-24 04:57 GMT

ತೂತುಕುಡಿ: ಪೊಲೀಸ್ ಲಾಕಪ್‌ನಲ್ಲಿ ತಂದೆ- ಮಗ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸತಂಕುಲಂ ಪಟ್ಟಣದಲ್ಲಿ ಮಂಗಳವಾರ ಸಾವಿರಕ್ಕೂ ಅಧಿಕ ಮಂದಿ ಬೃಹತ್ ಪ್ರತಿಭಟನೆ ನಡೆಸಿದರು.

ಜಯರಾಜ್ (50) ಹಾಗೂ ಅವರ ಪುತ್ರ ಫೆನಿಕ್ಸ್ ಇಮ್ಯಾನ್ಯುಯೆಲ್ (31) ಮೃತಪಟ್ಟವರು. ಈ ಘಟನೆ ಹಿನ್ನೆಲೆಯಲ್ಲಿ ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಪಡಿಸಲಾಗಿದೆ.

ಪ್ರತಿಭಟನಾಕಾರರು ಮತ್ತು ಇತರ ಸ್ಥಳೀಯರು ಹೇಳುವ ಪ್ರಕಾರ, ಜಯರಾಜ್ ಹಾಗೂ ಫೆನಿಕ್ಸ್, ಎಪಿಜೆ ಹೆಸರಿನ ಮೊಬೈಲ್ ಶಾಪ್ ಹೊಂದಿದ್ದರು. ಕಳೆದ ಶುಕ್ರವಾರ ರಾತ್ರಿ 8.15ಕ್ಕೆ ಅಂಗಡಿ ಮುಚ್ಚಿದ್ದರು. ಸತಂಪುರಂ ಪೊಲೀಸ್ ಠಾಣೆಯ ಗಸ್ತು ಸಿಬ್ಬಂದಿ, ಜಯರಾಜ್ ಅವರನ್ನು ನಿಗದಿಪಡಿಸಿದ ಸಮಯ ಮೀರಿ ಅಂಗಡಿ ತೆರೆದಿದ್ದ ಕಾರಣಕ್ಕೆ ಎಳೆದಾಡಿದರು. ಇದು ವಾಗ್ವಾದಕ್ಕೆ ಕಾರಣವಾಯಿತು.

ಶನಿವಾರ ಸಂಜೆ ಮತ್ತೆ ಪೊಲೀಸ್ ಸಿಬ್ಬಂದಿ ಅಂಗಡಿಗೆ ಆಗಮಿಸಿದಾಗ ಮತ್ತೆ ವಾಗ್ವಾದ ನಡೆಯಿತು. ಫೆನಿಕ್ಸ್ ಮಧ್ಯಪ್ರವೇಶಿಸಿದಾಗ, ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಇಬ್ಬರ ಮೇಲೂ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಯಿತು.
ಶನಿವಾರ ವೈದ್ಯಕೀಯ ತಪಾಸಣೆ ಬಳಿಕ ಕೋವಿಲ್‌ಪಟ್ಟಿ ಸಬ್‌ಜೈಲ್‌ಗೆ ಇಬ್ಬರನ್ನೂ ಕಳುಹಿಸಲಾಯಿತು. ಅಂದು ಸಂಜೆ ಫೆನಿಕ್ಸ್‌ಗೆ ಎದೆನೋವು ಕಾಣಿಸಿಕೊಂಡಿದ್ದು, ಜಯರಾಜ್ಗೆ ತೀವ್ರ ಜ್ವರ ಬಂದಿತ್ತು. ಕೋವಿಲ್‌ಪಟ್ಟಿ ಸರ್ಕಾರಿ ಆಸ್ಪತ್ರೆಗೆ ಇಬ್ಬರನ್ನೂ ಕರೆದೊಯ್ದರು. ಸೋಮವಾರ ಸಂಜೆ ಫೆನಿಕ್ಸ್ ಮೃತಪಟ್ಟರೆ, ಜಯರಾಜ್ ಮಂಗಳವಾರ ಬೆಳಗ್ಗೆ ಉಸಿರಾಟದ ತೊಂದರೆಯಿಂದ ಅಸುನೀಗಿದರು.

ಜಯರಾಜ್ ಪತ್ನಿ ಸೆಲ್ವಮಣಿ ಈ ಸಂಬಂಧ ದೂರು ನೀಡಿದ್ದು, ಪೊಲೀಸರ ದೌರ್ಜನ್ಯವೇ ಪತಿ ಹಾಗೂ ಮಗನ ಸಾವಿಗೆ ಕಾರಣ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News