ಎಸೆಸೆಲ್ಸಿ ಪರೀಕ್ಷೆಗಾಗಿ 82 ಶಾಲಾ ಬಸ್‌ಗಳ ಬಳಕೆ: ಉಡುಪಿ ಡಿಸಿ ಜಗದೀಶ್

Update: 2020-06-24 06:36 GMT

‌ಉಡುಪಿ, ಜೂ. 24: ನಾಳೆಯಿಂದ ನಡೆಯುವ ಎಸೆಸೆಲ್ಸಿ ಪರೀಕ್ಷೆಗೆ ಶಾಲಾ ವಾಹನ ಅಥವಾ ತಮ್ಮ ಸ್ವಂತ ವಾಹನದಲ್ಲಿ ಆಗಮಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಅದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸುಮಾರು 82 ಬಸ್ ಗಳನ್ನು ಪಡೆದುಕೊಳ್ಳಲಾಗಿದೆ. ಇದರ ಇಂಧನ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುತ್ತದೆ. ಇದಕ್ಕೆ 4.60ಲಕ್ಷ ರೂ. ಹಣವನ್ನು ಸರಕಾರ ಈಗಾಗಲೇ ಬಿಡುಗಡೆ ಮಾಡಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಉಡುಪಿ ನಗರದ ಒಳಕಾಡು ಸರಕಾರಿ ಪ್ರೌಢಶಾಲೆಯಲ್ಲಿರುವ ಎಸೆಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.

ಜೂ.25ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಎಲ್ಲ ರೀತಿಯ ತಯಾರಿಯನ್ನು ನಡೆಸುತ್ತಿದೆ. ಜಿಲ್ಲೆಯ 51 ಕೇಂದ್ರಗಳಲ್ಲಿಯೂ ಅತ್ಯುತ್ತಮ ವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಸುರಕ್ಷಿತ ಅಂತರ ಕಾಪಾಡಲು ಹಾಗೂ ಥಾರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಾಪಸಣೆ ಮತ್ತು ಸ್ಯಾನಿಟೈಸರ್ ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕ್ಳೊಲಾಗಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 14 ಸಾವಿರ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ಶಿಸ್ತು ಕಾಪಾಡಲು ಕಟ್ಟುನಿಟ್ಟಿನ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಇಲಾಖಾಧಿಕಾರಿಗಳೊಂದಿಗೆ ಹಲವು ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಸೂಚನೆಯನ್ನು ನೀಡಲಾಗಿದೆ. ಆದುದರಿಂದ ಪರೀಕ್ಷೆಗಳು ಸುಗಮವಾಗಿ ನಡೆಯಲಿದೆ ಎಂಬ ಆಶಯ ನಮ್ಮದು ಎಂದು ಅವರು ತಿಳಿಸಿದರು.

ಪರೀಕ್ಷೆಗೆ ಸಂಬಂಧಿಸಿ ಜಿಲ್ಲಾಡಳಿತ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಮಕ್ಕಳು ಪರೀಕ್ಷೆಯನ್ನು ಧೈರ್ಯವಾಗಿ ಬರೆಯಬೇಕು ಎಂದು ಅವರು ಮನವಿ ಮಾಡಿದರು. ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳನ್ನಾಗಿ ಗುರುತಿಸಲಾದ ಮೂರು ಶಾಲೆಗಳನ್ನು ಜಿಲ್ಲಾಡಳಿತ, ಒಂದು ತಿಂಗಳ ಹಿಂದೆ ಕ್ವಾರಂಟೇನ್ ಕೇಂದ್ರವನ್ನಾಗಿ ಬಳಸಿ ಕೊಂಡಿತ್ತು. ಈ ಶಾಲೆಗಳನ್ನು ಈಗಾಗಲೇ ಎರಡೆರಡು ಬಾರಿ ಸ್ಯಾನಿಟೈಸ್ ಮಾಡಲಾಗಿದೆ. ಪ್ರತಿ ಪರೀಕ್ಷೆ ನಡೆದ ನಂತರವೂ ಸ್ಯಾನಿಟೈಸ್ ಮಾಡಲು ಸೂಚನೆ ನೀಡಲಾಗಿದೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶೇಷಶಯನ ಉಪನಿರ್ದೇಶಕ ಕಾಂರಿಜ, ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಮೊದಲಾದವರು ಉಪಸ್ಥಿತರಿದ್ದರು.

10 ಹೆಚ್ಚುವರಿ ಪರೀಕ್ಷಾ ಕೇಂದ್ರ ಗುರುತು

ಜಿಲ್ಲೆಯ ಕಂಟೈನ್‌ಮೆಂಟ್ ವಲಯದಲ್ಲಿ ಪರೀಕ್ಷೆ ಬರೆಯುವ ಒಟ್ಟು ನಾಲ್ಕು ಮಕ್ಕಳಿದ್ದು, ಅವರಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತದೆ. ಟೆಂಪರೇಚರ್ ಹೆಚ್ಚಿದ್ದ ಮಕ್ಕಳನ್ನು ಕೂಡ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುತ್ತದೆ. ಮುಂದೆ ಕಂಟೈನ್‌ಮೆಂಟ್ ವಲಯಗಳು ಘೋಷಣೆಯಾದರೆ ಅದಕ್ಕಾಗಿ ಈಗಾಗಲೇ 10 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News