ಕುಪ್ಪೆಪದವು : ಎಸ್‌ಸಿ-ಎಸ್‌ಟಿ ಕಾಯ್ದಿರಿಸಿದ ಜಾಗ ಅತಿಕ್ರಮಣ ದೂರು

Update: 2020-06-24 12:13 GMT

ಕುಪ್ಪೆಪದವು, ಜೂ.24: ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಪಂ ವ್ಯಾಪ್ತಿಯ ಕಿಲೆಂಜಾರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮನೆಗಳಿಗೆ ಸಂಪರ್ಕಕ್ಕಾಗಿ ಮೀಸಲಿರಿಸಲಾದ ಜಾಗ ಅತಿಕ್ರಮಿಸಿ ನಿರ್ಮಿಸಲಾದ ಮನೆ ತೆರವುಗೊಳಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿ ಎರಡು ವರ್ಷವಾದರೂ ಕೂಡ ಈವರೆಗೆ ಕೋರ್ಟ್ ಆದೇಶ ಕಾರ್ಯಗತಗೊಳಿಸದ ತಹಶೀಲ್ದಾರ್ ಹಾಗೂ ಸ್ಥಳೀಯಾಡಳಿತದ ವಿರುದ್ಧ ಪಾಕಾಜೆ ನಿವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ವಿವರ : 1960ರಲ್ಲಿ ಕೂರಂಬಿಲ ಮತ್ತು ಲಿಂಗು ನಾಯ್ಕ ಎಂಬವರಿಗೆ ಸರಕಾರ ಕ್ರಮವಾಗಿ 96 ಮತ್ತು 51 ಸೆಂಟ್ಸ್ ಜಾಗ ಮಂಜೂರು ಮಾಡಿತ್ತು. ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು 8 ಸೆಂಟ್ಸ್ ಜಾಗ ಕಾಯ್ದಿರಿಸಲಾಗಿತ್ತು. ರಸ್ತೆಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಸ್ಥಳೀಯರೊಬ್ಬರು ಅಕ್ರಮವಾಗಿ ಮನೆ ನಿರ್ಮಿಸಿದ್ದರು. 2016ರಲ್ಲಿ ಗಣೇಶ್ ಪಾಕಾಜೆ ಸಮಾಜ ಕಲ್ಯಾಣ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಅನಧಿಕೃತವಾಗಿ ನಿರ್ಮಿಸಿದ ಮನೆ ತೆರವುಗೊಳಿಸುವಂತೆ ಮಂಗಳೂರು ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದರು. ಅದರ ವಿರುದ್ಧ ಮನೆ ಮಾಲಕರು ಹೈಕೋರ್ಟ್ ಮೊರೆ ಹೊಕ್ಕಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅಕ್ರಮ ಮನೆ ತೆರವುಗೊಳಿಸಿ ರಸ್ತೆ ನಿರ್ಮಿಸುವಂತೆ 2018ರಲ್ಲಿ ತಹಿಶೀಲ್ದಾರ್‌ಗೆ ಆದೇಶಿಸಿತ್ತು. ಆದರೆ ಕೋರ್ಟ್ ಆದೇಶ ಇದುವರೆಗೆ ಪಾಲನೆಯಾಗಿಲ್ಲ ಎಂದಿರುವ ಗಣೇಶ್ ಪಾಕಾಜೆ ‘ಅಧಿಕಾರಿಗಳಿಂದ ನ್ಯಾಯಾಲಯದ ಉಲ್ಲಂಘನೆ ಯಾಗಿದೆ’ ಎಂದು ದೂರಿದ್ದಾರೆ.

‘ಹೈಕೋರ್ಟ್ ಆದೇಶ ಪಾಲನೆಯ ನಿಟ್ಟಿನಲ್ಲಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದ್ದೇವೆ. ತಾಪಂ ಇಒ ಸ್ಥಳ ಪರಿಶೀಲನೆ ನಡೆಸಿದ್ದು, ಮನೆ ಕಳೆದುಕೊಳ್ಳುವ ವ್ಯಕ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಗುರುತಿಸುವ ಕೆಲಸ ಮಾಡಬೇಕೆಂದು ಕುಪ್ಪೆಪದವು ಗ್ರಾಮ ಲೆಕ್ಕಾಧಿಕಾರಿಗೆ ಸೂಚನೆ ನೀಡಿದ್ದಾರೆ’ ಎಂದು ಉಪ ತಹಶೀಲ್ದಾರ್ ಶಿವಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News