ಮಣಿಪಾಲ: ಆನ್‌ಲೈನ್ ಕ್ರಿಕೆಟ್ ಕೋಚಿಂಗ್ ಜೂ.25ರಂದು ಉದ್ಘಾಟನೆ

Update: 2020-06-24 12:33 GMT

ಮಣಿಪಾಲ, ಜೂ.24: ಕೊರೋನ ಕಾರಣದಿಂದ ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರಗಳಲ್ಲಿ ಕ್ರೀಡಾಕ್ಷೇತ್ರವೂ ಒಂದು. ಅದರ ಹೊಡೆತ ಕ್ರಿಕೆಟ್ ರಂಗದ ಮೇಲೂ ಬಿದ್ದಿದ್ದು, ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಚಟುವಟಿಕೆಗಳಿಗೆ ಮತ್ತೆ ಚಾಲನೆ ನೀಡುವ ನಿಟ್ಟಿನಲ್ಲಿ ಇದೀಗ ಆನ್‌ಲೈನ್ ಕ್ರಿಕೆಟ್ ತರಬೇತಿ ನೀಡುವ ಯೋಜನೆಯೊಂದು ಗುರುವಾರದಿಂದ ಇಲ್ಲಿ ಕಾರ್ಯರೂಪಕ್ಕೆ ಬರಲಿದೆ.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್‌ರ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆಟಗಾರ, ಬಿಸಿಸಿಐ ಕೋಚ್‌ಗಳಾದ ನಿತಿನ್ ಮೂಲ್ಕಿ, ದಯಾನಂದ ಬಂಗೇರ ಹಾಗೂ ರೆನ್ ಟ್ರೆವೆರ್ ಜೊತೆಯಾಗಿ ಕ್ರಿಕೆಟ್‌ನ ಹೊಸ ಆವಿಷ್ಕಾರವಾಗಿ ಉಡುಪಿಯಲ್ಲಿ ‘ಕ್ರಿಕ್ ಲರ್ನಿಂಗ್’ ಎಂಬ ಹೆಸರಿನ ಆನ್‌ಲೈನ್ (ಅಂತರ್‌ಜಾಲ) ಕ್ರಿಕೆಟ್ ತರಬೇತಿಯ ಯೋಜನೆಯನ್ನು ಸಿದ್ಧಪಡಿಸಿದ್ದಾರೆ.

 ಈ ಯೋಜನೆಯು ಅಂತರ್‌ಜಾಲದಲ್ಲಿ ಕ್ರಿಕ್.ಗ್ಯಾನೆಟ್.ಇನ್‌ನಲ್ಲಿ -www/Cric.gyanet.in- ಲಭ್ಯವಾಗಲಿದೆ. ಈ ಯೋಜನೆಯು ಜೂ.25ರ ಸಂಜೆ 5 ಗಂಟೆಗೆ ಆನ್‌ಲೈನ್ ಮೂಲಕವೇ ಉದ್ಘಾಟನೆಗೊಂಡು ಲೋಕಾರ್ಪಣೆಗೊಳ್ಳಲಿದೆ.

ಇದರ ಉದ್ಘಾಟನೆಯನ್ನು ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ನೆರವೇರಿಸಲಿರುವರು. ಕ್ರಿಕ್ ಲರ್ನಿಂಗಿನ ನಿರ್ದೇಶಕ ಡಾ. ಕೃಷ್ಣಪ್ರಸಾದ್, ಗ್ಯಾನೆಟ್ ಅಂತರ್‌ಜಾಲ ಸಂಸ್ಥೆಯ ಸಂದೀಪ್ ಪಾಟೀಲ್, ಸಂದೀಪ್ ಶೆಣೈ, ಡಾ. ವಿನೋದ್ ನಾಯಕ್, ಡಾ. ಫಿಡ್ಡಿ ಡೇಸ್ ಮೊದಲಾದವರು ಭಾಗವಹಿಸಲಿದ್ದಾರೆ. ದೇಶದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಜಿ.ಆರ್.ವಿಶ್ವನಾಥ್ ಮತ್ತು ನಿವೃತ್ತ ಪೊಲೀಸ್ ಅದಿಕಾರಿ ಕೆ. ಅಣ್ಣಾಮಲೈ, ಸಂದೇಶ ನೀಡಲಿರುವರು. ಈ ಕಾರ್ಯಕ್ರಮವು ಯುಟ್ಯೂಬ್ ಚ್ಯಾನಲ್‌ನಲ್ಲಿ (www.criclearning.com/youtube) ಮೂಲಕ ನೇರ ಪ್ರಸಾರ ಕಾಣಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News