×
Ad

ಪತನಗೊಂಡ ಪಾಕ್ ವಿಮಾನದ ಪೈಲಟ್‍ಗಳು ಕೊರೋನ ಕುರಿತು ಚರ್ಚಿಸುತ್ತಿದ್ದರು: ಪಾಕ್ ವಿಮಾನಯಾನ ಸಚಿವ

Update: 2020-06-24 18:48 IST

ಇಸ್ಲಾಮಾಬಾದ್,ಜೂ.24: ಕಳೆದ ತಿಂಗಳು ಪತನಗೊಂಡ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ವಿಮಾನದ ಪೈಲಟ್‌ಗಳು, ವಿಮಾನವನ್ನು ಚಲಾಯಿಸುತ್ತಿದ್ದಾಗ ತಮ್ಮ ಗಮನವನ್ನು ಕೇಂದ್ರೀಕರಿಸಿರಲಿಲ್ಲ ಹಾಗೂ ಅವರು ಕೊರೋನ ವೈರಸ್ ಸೋಂಕಿನ ಬಗ್ಗೆ ಚರ್ಚಿಸುತ್ತಿದ್ದರು ಎಂದು ಪಾಕ್ ವಾಯುಯಾನ ಸಚಿವ ಗುಲಾಂ ಸರ್ವಾರ್ ಖಾನ್ ತಿಳಿಸಿದ್ದಾರೆ.

ಪೈಲಟ್‌ಗಳ ಅತಿಯಾದ ಆತ್ಮವಿಶ್ವಾಸ ಹಾಗೂ ಏಕಾಗ್ರತೆಯ ಕೊರತೆ ವಿಮಾನದುರಂತಕ್ಕೆ ಕಾರಣವಾಯಿತು ಎಂದವರು ಹೇಳಿದ್ದಾರೆ.

 ಅವರು ಬುಧವಾರ ಪಾಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಐಎ ವಿಮಾನದುರಂತದ ಕುರಿತ ತನಿಖಾ ವರದಿಯನ್ನು ಮಂಡಿಸಿ ಮಾತನಾಡುತ್ತಿದ್ದರು.

  ‘‘ವಿಮಾನಯಾನದುದ್ದಕ್ಕೂ ಪೈಲಟ್‌ಗಳು ಕೊರೋನ ವೈರಸ್ ಹಾವಳಿ ಬಗ್ಗೆ ಚರ್ಚಿಸುತ್ತಿದ್ದರು. ಅವರು ಗಮನವನ್ನು ಕೇಂದ್ರೀಕರಿಸಿರಲಿಲ್ಲ. ಅವರು ಕೊರೋನದ ಬಗ್ಗೆಯೇ ಮಾತನಾಡುತ್ತಿದ್ದರು. ನಿಯಂತ್ರಣ ಗೋಪುರವು ವಿಮಾನ ಹಾರಾಟದ ಎತ್ತರವನ್ನು ಹೆಚ್ಚಿಸುವಂತೆ ಕೇಳಿದಾಗ ಪೈಲಟ್,ತಾನು ನಿಭಾಯಿಸುವುದಾಗಿ ಹೇಳಿದ್ದರು. ಅದು ಅತಿಯಾದ ಆತ್ಮವಿಶ್ವಾಸವಾಗಿತ್ತು ಎಂದವರು ಹೇಳಿದರು.

 ಲಾಹೋರ್‌ನಿಂದ ಕರಾಚಿಗೆ ಆಗಮಿಸುತ್ತಿದ್ದ ಪಿಐಎ ವಿಮಾನವು ಮೇ 22ರಂದು ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಜಿನ್ನಾ ಗಾರ್ಡನ್ ವಸತಿ ಪ್ರದೇಶದಲ್ಲಿ ಪತನಗೊಂಡಿತ್ತು. ದುರಂತಕ್ಕೀಡಾದ ವಿಮಾನದಲ್ಲಿ 91 ಪ್ರಯಾಣಿಕರು ಹಾಗೂ ಎಂಟು ಮಂದಿ ಸಿಬ್ಬಂದಿಯಿದ್ದರು. ಕೇವಲ ಇಬ್ಬರು ಪ್ರಯಾಣಿಕರನ್ನು ಹೊರತುಪಡಿಸಿ, ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News