×
Ad

ಕೊರೋನ ವೈರಸ್ ಗೆ ಔಷಧಿ:ರಾಮದೇವ್ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ದೂರು ದಾಖಲು

Update: 2020-06-24 19:58 IST

  ಮುಝಫ್ಫರ್‌ಪುರ,ಜೂ.24: ಯೋಗಗುರು ರಾಮದೇವ್ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಇಲ್ಲಿಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಅವರು ಕೋವಿಡ್-19ನ್ನು ಗುಣಪಡಿಸಬಲ್ಲ ‘ಕೊರೊನಿಲ್ ’ಹೆಸರಿನ ಔಷಧಿಯನ್ನು ಕಂಡು ಹಿಡಿದಿರುವುದಾಗಿ ಹೇಳಿಕೊಳ್ಳುವ ಮೂಲಕ ಲಕ್ಷಾಂತರ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅವರ ಜೀವಗಳನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜೂ.30ರಂದು ದೂರಿನ ವಿಚಾರಣೆ ನಡೆಯಲಿದೆ.

ತಮನ್ನಾ ಹಾಶ್ಮಿ ಎನ್ನುವವರು ರಾಮದೇವ್ ಮತ್ತು ಬಾಲಕೃಷ್ಣ ಅವರ ವಿರುದ್ಧ ವಂಚನೆ,ಕ್ರಿಮಿನಲ್ ಒಳಸಂಚು ಮತ್ತು ಇತರ ಆರೋಪಗಳಲ್ಲಿ ಎಫ್‌ಐಆರ್ ದಾಖಲಿಸುವಂತೆ ಕೋರಿ ಈ ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ. ತನ್ನನ್ನು ಸಾಮಾಜಿಕ ಕಾರ್ಯಕರ್ತ ಎಂದು ಗುರುತಿಸಿಕೊಳ್ಳುವ ಹಾಶ್ಮಿ ವಿವಿಧ ವಿಷಯಗಳಲ್ಲಿ ರಾಜಕಾರಣಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ದೂರುಗಳನ್ನು ದಾಖಲಿಸುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ.

ಪತಂಜಲಿ ಸಂಶೋಧನಾ ಸಂಸ್ಥೆಯ ಸಂಚಾಲಕ ರಾಮದೇವ್ ಮತ್ತು ಅವರ ಸಹಾಯಕ ಹಾಗೂ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಅವರನ್ನು ಆರೋಪಿಗಳೆಂದು ದೂರಿನಲ್ಲಿ ಹೆಸರಿಸಲಾಗಿದೆ.

‘ಕೊರೊನಿಲ್ ’ ಮಾತ್ರೆಗಳ ಕುರಿತು ಜಾಹೀರಾತುಗಳನ್ನು ನಿಲ್ಲಿಸುವಂತೆ ಕೇಂದ್ರ ಆಯುಷ್ ಸಚಿವಾಲಯವು ಪತಂಜಲಿ ಸಂಸ್ಥೆಗೆ ಸೂಚಿಸಿರುವುದನ್ನು ಹಾಗೂ ಔಷಧಿಯ ಸಂಯೋಜನೆಯ ವಿವರಗಳ ಕುರಿತು ಯಾವುದೇ ಮಾಹಿತಿಯನ್ನು ತನಗೆ ಒದಗಿಸಿಲ್ಲ ಎಂದು ಹೇಳಿರುವುದನ್ನು ಹಾಶ್ಮಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಕೊರೊನಿಲ್ ಮಾತ್ರೆ ಮತ್ತು ಸ್ವಾಸರಿ ವಟಿ’ ಔಷಧಿಗಳನ್ನು ಬಿಡುಗಡೆಗೊಳಿಸಿರುವ ಪತಂಜಲಿ ಸಂಸ್ಥೆಯು,ಇವು ಏಳು ದಿನಗಳಲ್ಲಿ ಕೊರೋನ ವೈರಸ್ ಸೋಂಕನ್ನು ಗುಣಪಡಿಸುತ್ತವೆ ಎಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News