ಮಾರ್ಪಳ್ಳಿ ಬಳಗದಿಂದ ಹುಲಿವೇಷ ಹಾಕದಿರಲು ನಿರ್ಧಾರ
ಉಡುಪಿ, ಜೂ. 24: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಚಂಡೆ ಬಳಗವು ಕೊರೋನ ಹಿನ್ನೆಲೆಯಲ್ಲಿ ಈ ವರ್ಷ ಕೃಷ್ಣ ಜನ್ಮಾಷ್ಟಮಿ-ವಿಟ್ಲಪಿಂಡಿ ಮಹೋತ್ಸವ ಪ್ರಯುಕ್ತ ಹುಲಿವೇಷ ಹಾಕದಿರಲು ನಿರ್ಧರಿಸಿದೆ.
ಬಳಗದ ಸದಸ್ಯರು ಕಳೆದ 16 ವರ್ಷಗಳಿಂದ ನಿರಂತವಾಗಿ ಹುಲಿವೇಷವನ್ನು ಹಾಕಿ, ಅದರಲ್ಲಿ ಸಂಗ್ರಹವಾದ ಹಣವನ್ನು ಮಾರ್ಪಳ್ಳಿ ದೇವ ಸ್ಥಾನದ ಅಭಿವೃದ್ಧಿ ಹಾಗೂ ಬಡ ಜನರ ವೈದ್ಯಕೀಯ ಚಿಕಿತ್ಸೆಗೆ ನೀಡುತ್ತಿದ್ದರು. ಆದರೆ ಈ ವರ್ಷ ಎರಡು ತಿಂಗಳ ಲಾಕ್‌ಡೌನ್‌ನಿಂದ ಎಲ್ಲ ರೀತಿ ಆರ್ಥಿಕ ಚಟುವಟಿಕೆಗಳು ನಷ್ಟದಲ್ಲಿದ್ದು, ಜನರು ತೊಂದರೆ ಅನುಭವಿಸುತ್ತಿರುವುದರಿಂದ ವಿಟ್ಲಪಿಂಡಿ ಬಣ್ಣ ಹಚ್ಚದಿರಲು ತೀರ್ಮಾನಿಸಿದ್ದಾರೆ.
‘ಜನರಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಾವು ವೇಷ ಧರಿಸುವುದು ಸರಿಯಲ್ಲ. ಒಂದು ವೇಳೆ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಲೀಲೋತ್ಸವ ನಡೆದರೆ ನಾವು ಅಲ್ಲಿ ಬಣ್ಣದ ಸೇವೆಯನ್ನು ನೀಡಲು ಸಿದ್ಧರಿದ್ದೇವೆ. ಆದರೆ ಸಾರ್ವಜನಿಕವಾಗಿ ಮನೆಮನೆಗೆ ಹೋಗುವುದಿಲ್ಲ ಎಂದು ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಚಂಡೆ ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಉಪಾಧ್ಯ ಮಾರ್ಪಳ್ಳಿ ತಿಳಿಸಿದ್ದಾರೆ.