ಇಂಧನ ಬೆಲೆ ಏರಿಕೆ ಖಂಡಿಸಿ ಟೂರಿಸ್ಟ್ ಕಾರು ಚಾಲಕರಿಂದ ಪ್ರತಿಭಟನೆ
ಬಂಟ್ವಾಳ, ಜೂ. 25: ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕರ ಸಂಘದಿಂದ ಗುರುವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ ಪ್ರತಿಭಟನಾಕಾರರನ್ನುದ್ಧೇಶಿಸಿ ಮಾತನಾಡಿ, ಅಂತರ್ ರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಕಡಿಮೆಯಾದರೂ ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಲೇ ಇದೆ. ರಾಜ್ಯ ಸರಕಾರ ಎಕ್ಸೈಸ್ ಮತ್ತು ವ್ಯಾಟ್ ತೆರಿಗೆಯನ್ನು ಹಾಕುವುದರಿಂದ ಕಚ್ಚಾ ತೈಲಬೆಲೆಯ ಲಾಭ ಬಳಕೆದಾರರಿಗೆ ಸಿಗದಂತಾಗುತ್ತಿದೆ ಎಂದರು.
ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿರುವ ಕೊರೋನ ವೈರಸ್ ನಿಂದಾಗಿ ಈಗಾಗಲೇ ಕಂಗಾಲಾಗಿರುವ ಚಾಲಕ ಸಮುದಾಯ ತೈಲಬೆಲೆ ಏರಿಕೆಯಿಂದ ಮತ್ತಷ್ಟು ತೊಂದೆರೆಗೀಡಾಗಿದೆ. ಚಾಲಕ ಸಮುದಾಯದ ಬವಣೆಯನ್ನು ಅರಿತುಕೊಂಡು ತೈಲಬೆಲೆ ಇಳಿಕೆಯಾಗುವಂತೆ ವ್ಯಾಟ್ ಮತ್ತು ಎಕ್ಸೈಸ್ ತೆರಿಗೆಯನ್ನು ಕಡಿತಗೊಳಿಸಲು ರಾಜ್ಯ ಸರಕಾರಕ್ಕೆ ಸೂಚಿಸಬೇಕು. ತನ್ಮೂಲಕ ಬಡಪಾಯಿ ಚಾಲಕ ವರ್ಗದ ಮೇಲೆ ಕರುಣೆ ತೋರಬೇಕು ಎಂದು ಒತ್ತಾಯಿಸಿದರು.
ಸಂಘದ ಸಂಚಾಲಕ ಕೃಷ್ಣ ಅಲ್ಲಿಪಾದೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪದಾಧಿಕಾರಿಗಳಾದ ಪುರುಷೋತ್ತಮ ನಾಟಿ, ಸುರೇಶ್ ಬಂಗೇರ, ವಿನ್ಸೆಂಟ್ ರೋಡ್ರಿಗಸ್, ಜೀತೋ ಟಾಟಾ ಟೂರಿಸ್ಟ್ ಕಾರು ಚಾಲಕರ ಹಾಗೂ ಗೂಡ್ಸ್ ಟೆಂಪೋ ಚಾಲಕರು ಉಪಸ್ಥಿತರಿದ್ದರು. ಬಳಿಕ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.