ಅಮೆರಿಕ ಪೊಲೀಸರ ದೌರ್ಜನ್ಯ: ‘ಉಸಿರಾಡಲಾಗದೆ’ ಮೃತಪಟ್ಟ ಇನ್ನೋರ್ವ ವ್ಯಕ್ತಿ

Update: 2020-06-25 17:32 GMT

ವಾಶಿಂಗ್ಟನ್, ಜೂ. 25: ಮೇ 25ರಂದು ಅಮೆರಿಕದ ಮಿನಪೊಲಿಸ್ ನಗರದಲ್ಲಿ ಪೊಲೀಸರ ಬಂಧನದಲ್ಲಿ ಉಸಿರುಗಟ್ಟಿ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿರುವ ರೀತಿಯಲ್ಲೇ, ಅದಕ್ಕಿಂತಲೂ ಒಂದು ತಿಂಗಳು ಹಿಂದೆ ಅಮೆರಿಕದ ಅರಿಝೋನ ರಾಜ್ಯದ ಟಕ್ಸನ್ ನಗರದಲ್ಲಿ ಪೊಲೀಸರ ಬಂಧನದ ವೇಳೆ ಲ್ಯಾಟಿನ್ ವ್ಯಕ್ತಿಯೋರ್ವ ಮೃತಪಟ್ಟಿರುವುದು ಈಗ ಬೆಳಕಿಗೆ ಬಂದಿದೆ.

ಇದಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನು ಬುಧವಾರ ಬಿಡುಗಡೆ ಮಾಡಿರುವ ಟಕ್ಸನ್ ಪೊಲೀಸ್ ಮುಖ್ಯಸ್ಥ ಕ್ರಿಸ್ ಮ್ಯಾಗ್ನಸ್, ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಪೊಲೀಸರು ಎಪ್ರಿಲ್ 21ರಂದು 27 ವರ್ಷದ ಕಾರ್ಲೋಸ್ ಇನ್‌ಗ್ರಾಮ್ ಲೊಪೇಝ್ ಎಂಬ ವ್ಯಕ್ತಿಗೆ ಕೋಳ ತೊಡಿಸಿ ಮುಖ ಕೆಳಗೆ ಮಾಡಿ ಹೊಟ್ಟೆಯ ಮೇಲೆ ಮಲಗಿಸಿದಾಗ, “ನನಗೆ ಉಸಿರಾಡಲು ಆಗುತ್ತಿಲ್ಲ” ಎಂದು ಆ ವ್ಯಕ್ತಿ ಹೇಳುವುದು ವೀಡಿಯೊದಲ್ಲಿ ಕೇಳುತ್ತದೆ. ಆತನ ಕೈ ಬೆನ್ನಿನ ಹಿಂಭಾಗಕ್ಕೆ ಕಟ್ಟಲ್ಪಟ್ಟಿದ್ದು ಸುಮಾರು 12 ನಿಮಿಷಗಳ ಕಾಲ ಆತನನ್ನು ಹೊಟ್ಟೆಯ ಮೇಲೆ ಮಲಗಿಸಲಾಗಿತ್ತು. ಬಳಿಕ ಆತ ಮೃತಪಟ್ಟಿದ್ದಾರೆ.

ಸಂತ್ರಸ್ತ ವ್ಯಕ್ತಿಯು ಪದೇ ಪದೇ ನೀರು ಕೇಳುವುದು, ಬೊಬ್ಬೆ ಹೊಡೆಯುವುದು, ನರಳುವುದು ಹಾಗೂ ಜೋರಾಗಿ ಉಸಿರಾಡುವುದು ವೀಡಿಯೊದಲ್ಲಿ ಕೇಳುತ್ತದೆ. ಬಳಿಕ ಆತ ಪ್ರಜ್ಞೆ ಕಳೆದುಕೊಂಡು ಸಾವಿಗೀಡಾಗಿದ್ದಾರೆ.

ಘಟನೆಗೆ ಸಂಬಂಧಿಸಿ ಮೂವರು ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂದು ಮ್ಯಾಗ್ನಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News