ದೇಶದಲ್ಲಿ 15 ಸಾವಿರ ದಾಟಿದ ಕೊರೋನ ಸಾವು
ಹೊಸದಿಲ್ಲಿ, ಜೂ.26: ದೇಶದಲ್ಲಿ ಕೋವಿಡ್-19 ಸೋಂಕಿತರ ಸಾವಿನ ಸಂಖ್ಯೆ ಗುರುವಾರ 15 ಸಾವಿರ ದಾಟಿದೆ. ಗುರುವಾರ ಒಟ್ಟು 402 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 15,300 ಆಗಿದೆ.
ಭಾರತದಲ್ಲಿ ಮೊದಲ ಕೊರೋನ ಸಾವು ಮಾರ್ಚ್ 10ರಂದು ಸಂಭವಿಸಿದ್ದು, ಸಾವಿನ ಸಂಖ್ಯೆ 5,000 ಗಡಿ ದಾಟಲು 81 ದಿನಗಳಾಗಿದ್ದವು. ಆದರೆ 10 ಸಾವಿರದ ಗಡಿ ದಾಟಲು ಮತ್ತೆ ಕೇವಲ 17 ದಿನಗಳನ್ನು ತೆಗೆದುಕೊಂಡಿದ್ದು, ಕೇವಲ ಒಂಬತ್ತು ದಿನಗಳಲ್ಲಿ ಸಾವಿನ ಸಂಖ್ಯೆ ಮತ್ತೆ 5 ಸಾವಿರ ಏರಿಕೆಯಾಗಿದೆ. ಒಟ್ಟಾರೆ ಜೂನ್ ತಿಂಗಳಲ್ಲೇ 9,896 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ದೇಶದ ಒಟ್ಟು ಸಾವಿನ ಪೈಕಿ ಶೇಕಡ 82.6ರಷ್ಟು ಮಂದಿ ಮಹಾರಾಷ್ಟ್ರ (6931), ದಿಲ್ಲಿ (2,429), ಗುಜರಾತ್ (1,754), ತಮಿಳುನಾಡು (911) ಮತ್ತು ಉತ್ತರ ಪ್ರದೇಶ (611) ರಾಜ್ಯಗಳಲ್ಲಿ ಮೃತಪಟ್ಟಿದ್ದಾರೆ. ಅಂತೆಯೇ ದೇಶದಲ್ಲಿ ಗುರುವಾರ ಗರಿಷ್ಠ ಸಂಖ್ಯೆಯ ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುರುವಾರ 17,835 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,90,964ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 4,841 ಮಂದಿಗೆ ಸೋಂಕು ತಗುಲಿದ್ದು, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಗರಿಷ್ಠ ಪ್ರಕರಣಗಳು ದಾಖಲಾಗಿವೆ.
ಇದುವರೆಗೆ 2,85,277 ಮಂದಿ ಗುಣಮುಖರಾಗಿದ್ದು, ಚೇತರಿಕೆ ದರ 58.1ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,47,741ಕ್ಕೇರಿದೆ. ಗುರುವಾರ ಮಹಾರಾಷ್ಟ್ರದಲ್ಲಿ ದಾಖಲಾದ ಪ್ರಕರಣಗಳ ಶೇಕಡ 28ರಷ್ಟು ಪ್ರಕರಣಗಳು ಮುಂಬೈ ಮಹಾನಗರದಲ್ಲಿ ದಾಖಲಾಗಿವೆ. ಇಡೀ ರಾಜ್ಯದಲ್ಲಿ 192 ಮಂದಿ ಗುರುವಾರ ಸೋಂಕಿಗೆ ಬಲಿಯಾಗಿದ್ದು, ಮುಂಬೈ ಮಹಾನಗರದಲ್ಲಿ 98 ಮಂದಿ ಅಸುನೀಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 4,062ಕ್ಕೇರಿದ್ದು, ಮುಂಬೈ ಮಹಾನಗರದ ಸಾವಿನ ದರ 5.73% ಆಗಿದೆ. ಮಹಾರಾಷ್ಟ್ರದಲ್ಲಿ ಈ ಪ್ರಮಾಣ 4.69%.
ದಿಲ್ಲಿಯಲ್ಲಿ 70 ಸಾವಿರ ಪ್ರಕರಣಗಳು ದಾಖಲಾದ ಮರುದಿನವೇ ಮುಂಬೈನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7,0878ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಗುರುವಾರ 45 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 911ಕ್ಕೇರಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಒಂದೇ ದಿನ ಮೂರು ಸಾವಿರಕ್ಕಿಂತ ಅಧಿಕ ಪ್ರಕರಣ (3,509) ದಾಖಲಾಗಿದ್ದು, ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 70,977ಕ್ಕೇರಿದೆ.